

ರಾಮನಗರ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ ಇನ್ನೂ ಹಲವು ಯಜಮಾನಿಯರ ಅರ್ಜಿ ಹಾಕುವ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿಲ್ಲ. ರಾಜ್ಯದ ಬಹುತೇಕ ಎಲ್ಲ ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಮೂರನೇ ಕಂತು ಬಿಡುಗಡೆಗೆ ಸಿದ್ಧತೆ ನಡೆದಿದೆ. ಆದರೆ, ಈಗಲೂ ಜಿಲ್ಲೆ ಸುಮಾರು 31 ಸಾವಿರ ಗೃಹಲಕ್ಷ್ಮಿಯರಿಗೆ ಖಾತೆಗೆ ಹಣ ಜಮಾ ಆಗುವ ಮಾತು ದೂರ ಉಳಿಯಿತು. ಅವರಿಗೆ ಇನ್ನೂ ನೋಂದಣಿ ಭಾಗ್ಯವೇ ಸಿಕ್ಕಿಲ್ಲ.
ಈ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ - ಆಹಾರ ಇಲಾಖೆ ಕಡೆಗೆ ಬೊಟ್ಟು ಮಾಡುತ್ತಿದ್ದರೆ, ಆಹಾರ ಇಲಾಖೆ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ, ತಪ್ಪೆಲ್ಲವೂ ಯೋಜನೆ ಜಾರಿ ಇಲಾಖೆಯದ್ದೇ ಎಂದು ಜಾರಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಇದುವರೆಗೂ 31, 302 ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ ದೊರೆತಿಲ್ಲ. ಕಾರಣ, ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಿಸದೇ ಇರುವುದು, ಕುಟುಂಬದ ಮುಖಸ್ಥರು ಈಗಲೂ ಪುರುಷರೇ ಆಗಿರುವುದು, ಇಲ್ಲವೇ ಪಡಿತರ ಚೀಟಿಯಲ್ಲಿ ಮಹಿಳೆ ಹೆಸರನ್ನು ಈಗ ಯಜಮಾನಿ ಎಂದು ನಮೂದಿಸಿ ಬದಲಾಯಿಸಿರುವುದು ಎನ್ನುವ ಮೂರು ಪ್ರಮುಖ ಕಾರಣವನ್ನು ನೀಡಲಾಗಿದೆ.
ಆದರೆ, ಅರ್ಜಿ ಸ್ವೀಕಾರ ಆರಂಭಗೊಂಡ ದಿನದಿಂದಲೂ ಈ ಬದಲಾವಣೆ ನಡೆಯುತ್ತಿದ್ದರೂ, ಇಷ್ಟು ದಿನ ಕಳೆದರೂ ಸಮಸ್ಯೆಗೆ ಪರಿಹಾರ ಏಕಿಲ್ಲ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಕಳೆದ ಕೆಲವು ದಿನಗಳಿಂದಲೂ ಅರ್ಜಿ ಹಾಕಲು ಆಗುತ್ತಿರುವ ಸಮಸ್ಯೆ ಬಗ್ಗೆ ಎಚ್ಚೆತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮದಲ್ಲಿ ಎಷ್ಟು ಮಂದಿ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ದಾಖಲೆ ಸಮೇತ ಸಂಗ್ರಹ ಮಾಡಿಕೊಳ್ಳುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಡಿತರ ಚೀಟಿಯಲ್ಲಿದ್ದ ಕುಟುಂಬದ ಮುಖ್ಯಸ್ಥರು ಮೃತಪಟ್ಟಿದ್ದರೆ, ಆ ಜಾಗಕ್ಕೆ ಅದೇ ಕುಟುಂಬದ ಮತ್ತೊಬ್ಬ ಮಹಿಳೆಯನ್ನು ಯಜಮಾನಿ ಎಂದು ನಮೂದಿಸಿ, ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ, ಈ ರೀತಿ ಬದಲಾವಣೆ ಆದ ರೇಷನ್ ಕಾರ್ಡ್‌ಗಳು ಗೃಹಲಕ್ಷ್ಮಿಯೋಜನೆ ನೋಂದಣಿ ಆನ್‌ಲೈನ್ ಪೋರ್ಟಲ್‌ನಲ್ಲಿ ಸ್ವೀಕಾರ ಆಗುತ್ತಿಲ್ಲ. ಅರ್ಜಿ ಹಾಕುವ ವೇಳೆ ರೇಷನ್ ಕಾರ್ಡ್ ಸಂಖ್ಯೆ ಸರಿ ಇಲ್ಲ ಎನ್ನುವ ಸಂದೇಶ ಬರುತ್ತಿದೆ.
ಈ ಸಮಸ್ಯೆ ಇಂದು ಸರಿಯಾಗಬಹುದು, ನಾಳೆ ಸರಿ ಹೋಗಬಹುದು ಎನ್ನುವ ನಂಬಿಕೆಯಲ್ಲಿಯೇ ಗ್ರಾಮ ಒನ್ ಸೇರಿ ಇತರ ಕೇಂದ್ರಗಳಿಗೆ ತೆರಳುವ ಮಹಿಳೆಯರು, ತಮಗೆ ಹಣ ಸಿಗುತ್ತಿಲ್ಲ ಎಂದು ಬೇಸತ್ತು ಸರ್ಕಾರವನ್ನು ಶಪಿಸುತ್ತಿದ್ದಾರೆ.
ಸಮಸ್ಯೆಗೆ ಏನು ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಆಹಾರ ಇಲಾಖೆ ಯಾವುದೇ ರೇಷನ್‌ಕಾರ್ಡ್ ಅಪ್‌ಡೇಟ್ ಮಾಡಿದ ನಂತರ ಡೇಟಾ ಬೇಸ್‌ನಲ್ಲಿ ಅದು ಬದಲಾವಣೆ ಆಗದಿದ್ದರೆ ಈ ರೀತಿ ಸಮಸ್ಯೆ ಆಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆೆಯಲ್ಲಿನ ಕೆಲವು ಸಮಸ್ಯೆಗಳನ್ನು ಸರಿಪಡಿಸಿಕೊಂಡು ಅರ್ಜಿ ಹಾಕಿರುವ ಬಹುತೇಕ ಎಲ್ಲರಿಗೂ ಹಣ ತಲುಪುವಂತೆ ಮಾಡಲಾಗಿದೆ. ಈಗ ಅರ್ಜಿ ಸ್ವೀಕಾರ ಆಗದೇ ಇರುವುದಕ್ಕೆ ರೇಷನ್ ಕಾರ್ಡ್ ಸಮಸ್ಯೆಯೇ ಕಾರಣವಾಗಿರುತ್ತದೆ ಎಂದು ವಾದಿಸುತ್ತಾರೆ.
ಆಹಾರ ಇಲಾಖೆ ನಮ್ಮಲ್ಲಿ ಎಲ್ಲವೂ ಸರಿ ಎನ್ನುವ ಉತ್ತರವನ್ನು ನೀಡುತ್ತಿದೆ. ಇ-ಕೆವೈಸಿ ಆಗದ ಹೊರತು ಪಡಿತರದಾರರಿಗೆ ರೇಷನ್ ನೀಡಲು ಆಗುವುದಿಲ್ಲ. ತಿದ್ದುಪಡಿಗೆ ಬರುವ ಅರ್ಜಿಗಳನ್ನು ಸ್ವೀಕಾರ ಮಾಡಿ, ಆಹಾರ ನಿರೀಕ್ಷರು ಸರಿ ಎಂದು ಹೇಳಿದ ತಕ್ಷಣವೇ ಪಡಿತರ ಚೀಟಿಯಲ್ಲಿ ಮಾಹಿತಿ ತಿದ್ದುಪಡಿ ಆಗುತ್ತದೆ. ಇದರಲ್ಲಿ ಯಾವುದೇ ವಿಳಂಬ ಇಲ್ಲ. ಆದರೆ, ಹೊಸ ಮಾಹಿತಿ ಅಪ್‌ಲೋಡ್ ಆಗುವ ಡೇಟಾ ಬೇಸ್‌ನಿಂದ ಮಾಹಿತಿಯನ್ನು ಅರ್ಜಿ ಹಾಕುವ ಅಪ್ಲಿಕೇಷನ್‌ಗೆ ಅಪ್‌ಡೇಟ್ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ. ಇದನ್ನು ಅವರೇ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಡೆ ಬೊಟ್ಟು ಮಾಡುತ್ತಾರೆ.
ಜಿಲ್ಲೆಯಲ್ಲಿ ಇದುವರೆಗೂ ಗೃಹಲಕ್ಷ್ಮಿ ಯೋಜನೆಯಲ್ಲಿ ಶೇ. 89.37ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿದ ಕುಟುಂಬಗಳನ್ನು ಯೋಜನೆ ವ್ಯಾಪ್ತಿಗೆ ತರುವ ಸಂಬಂಧ ಕಾರ್ಯಪ್ರವೃತ್ತರಾಗಿದ್ದೇವೆ. ಕೆಲವು ಸಮಸ್ಯೆಗಳಿದ್ದು ಇವುಗಳನ್ನು ಸರಿಪಡಿಸಿಕೊಂಡು ಎಲ್ಲರಿಗೂ ಯೋಜನೆ ತಲುಪುವಂತೆ ಮಾಡಲಾಗುವುದು. ಪ್ರಸನ್ನಕುಮಾರ್, ಡಿಡಿ (ಪ್ರಭಾರ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬಾಕಿ ಇರುವ ಕುಟುಂಬಗಳು
ತಾಲೂಕು ಗುರಿ ಬಾಕಿ ಶೇಕಡ
ಚನ್ನಪಟ್ಟಣ 70937 7865 11.08
ಹಾರೋಹಳ್ಳಿ 23333 2547 10.91
ಕನಕಪುರ 73761 5925 08.03
ಮಾಗಡಿ 56457 6623 11.73
ರಾಮನಗರ 69911 8342 11.93
ಒಟ್ಟು 294399 31302 10.63