ಗೃಹಲಕ್ಷ್ಮೀ ನೋಂದಣಿಗೆಂದು 479 ಕೇಂದ್ರ ಸ್ಥಾಪನೆ: ಯೋಜನೆ ಫಲಾನುಭವಿಯಾಗಲು ಯಾವೆಲ್ಲ ದಾಖಲೆ ಬೇಕು ಗೊತ್ತಾ?

Gruhalakshmi
Published on

ಮಂಡ್ಯ: ಗೃಹಲಕ್ಷ್ಮೀ ಯೋಜನೆಯ ನೋಂದಣಿ ಪ್ರಕ್ರಿಯೆಗಾಗಿ ಜಿಲ್ಲೆಯಲ್ಲಿ 479 ಕೇಂದ್ರಗಳನ್ನು ಗುರುತಿಸಲಾಗಿದೆ. ಅಂತೆಯೇ ಅಗತ್ಯ ಸೌಲಭ್ಯವನ್ನು ಒದಗಿಸಲಾಗಿದೆ.

ಜಿಲ್ಲೆಯಲ್ಲಿ 216 ಗ್ರಾಮ ಒನ್ ಕೇಂದ್ರ, 233 ಗ್ರಾ.ಪಂಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ 5 ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿ ನಡೆಯಲಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2 ರಿಂದ 3 ವಾರ್ಡ್‌ಗೆ ಒಂದಂತೆ 25 ಕೇಂದ್ರ ತೆರೆಯಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ 5, ಪುರಸಭೆ ವ್ಯಾಪ್ತಿಯಲ್ಲಿ 6, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 1 ನೋಂದಣಿ ಕೇಂದ್ರ ತೆರೆಯಲಾಗುತ್ತಿದೆ. ಎಲ್ಲ ಕೇಂದ್ರಗಳಲ್ಲೂ ಕುಡಿಯುವ ನೀರು, ಆಸನಗಳ ವ್ಯವಸ್ಥೆ ಜತೆಗೆ ಇಂಟರ್‌ನೆಟ್, ಪವರ್ ಬ್ಯಾಕ್‌ಅಪ್ ಇರುವಂತೆ ಕ್ರಮ ವಹಿಸಲಾಗಿದೆ. ಮಂಡ್ಯದ ನಗರಸಭೆ ಕಚೇರಿ, ಬಾಲಭವನ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಸ್ವರ್ಣಸಂದ್ರದ ಬಯಲು ರಂಗಮಂದಿರ, ಜಿ.ಪಂ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಯೋಜನೆಗೆ ನೋಂದಾಯಿಸುವ ಪ್ರಕ್ರಿಯೆ ನೋಡಿಕೊಳ್ಳಲು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಕೇಂದ್ರಕ್ಕೂ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಫಲಾನುಭವಿಗಳು ನೋಂದಣಿಗೆ ನಿಗದಿಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ(1902) ಕರೆ ಮಾಡಿ ಅಥವಾ ಮೊ.ಸಂ 8147500500 ಸಂಖ್ಯೆ ಎಸ್‌ಎಂಎಸ್ ಕಳುಹಿಸಿ ಪಡೆಯಬಹುದು. ಪ್ರಮುಖವಾಗಿ ಪಡಿತರ ಚೀಟಿ, ಆಧಾರ್‌ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಪಾಸ್‌ಬುಕ್, ಪತಿಯ ಆಧಾರ್‌ಕಾರ್ಡ್ ಅನ್ನು ನೋಂದಣಿ ಮಾಡಿಸಿಕೊಳ್ಳಬೇಕಿದೆ. ಅಂತೆಯೇ ಆಧಾರ್ ಲಿಂಕ್ ಆಗಿರುವ ಖಾತೆ ಹೊರತಾಗಿ ಬೇರೆ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಆ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅನ್ನು ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net