

ಮಂಡ್ಯ: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯಲ್ಲಿ 4,79,393 ಮಹಿಳೆಯರು ನೋಂದಣಿ ಮಾಡಿಸಲು ಅರ್ಹರಾಗಿದ್ದಾರೆ. 51,912 ಕಾರ್ಡ್‌ಗಳಲ್ಲಿ ಪುರುಷರು ಮುಖ್ಯಸ್ಥರಾಗಿದ್ದಾರೆ. ಈ ಪಡಿತರ ಚೀಟಿಯಲ್ಲಿಯೂ ಕುಟುಂಬದ ಹಿರಿಯ ಸದಸ್ಯ ಮಹಿಳೆಯನ್ನೇ ಯಜಮಾನಿಯಾಗಿ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ತಾಲೂಕು ಕಚೇರಿಗಳಲ್ಲಿ ತಿದ್ದುಪಡಿ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಪ್ರಮುಖವಾಗಿ ಎರಡು ಮಾದರಿಯಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಮೊದಲನೆಯದಾಗಿ ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರದ ಎಸ್‌ಎಂಎಸ್ ಸಂದೇಶ ಕನ್ನಡದಲ್ಲಿಯೇ ಸಂಬಂಧಪಟ್ಟವರ ಮೊಬೈಲ್‌ಗೆ ಬರಲಿದೆ. ಗ್ರಾಮೀಣ ಪ್ರದೇಶದವರು ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಪ್ರದೇಶದವರು ಕರ್ನಾಟಕ ಒನ್ ಕೇಂದ್ರ, ಸ್ಥಳೀಯ ನಗರಾಡಳಿತ ಸಂಸ್ಥೆಗಳಿಂದ ತೆರೆಯುವ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಬಹುದು. ಅಂತೆಯೇ ಎರಡನೇಯದಾಗಿ ಕೇಂದ್ರಗಳಿಗೆ ಬರಲಾಗದ ಮಹಿಳೆಯರ ಮನೆಗಳಿಗೆ ಪ್ರಜಾಪ್ರತಿನಿಧಿಗಳೇ ತೆರಳಿ ಮೊಬೈಲ್ ಅಪ್ಲಿಕೇಷನ್ ಮೂಲಕ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳುತ್ತಾರೆ. ಈ ಪ್ರಜಾಪ್ರತಿನಿಧಿಗಳು ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕರಾಗಿದ್ದಾರೆ. ಇವರು ಯಾವುದೇ ವೇತನ, ಗೌರವಧನವಿಲ್ಲದೆ ಉಚಿತವಾಗಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.