ಕಾಂಗ್ರೆಸ್‌ನಿಂದಲೇ ಬಡವರ ಕಲ್ಯಾಣ ; ಶಾಸಕ ಆಸೀಫ್ ಸೇಠ್ ಅಭಿಮತ

IMG-20230830-WA0026.jpg
Published on

ಬೆಳಗಾವಿ : ದೇಶಾದ್ಯಂತ ‘ಬಡತನ ತೊಲಗಿಸಿ’ ಎಂಬ ಘೋಷಣೆ ಮೊಳಗಿಸಿದ ಅಂದಿನ ಪ್ರಧಾನಮಂತ್ರಿ ಇಂಧಿರಾಗಾಂಧಿ ಅವರಿಂದ ಈಗಿನ ಸಿಎಂ ಸಿದ್ದರಾಮಯ್ಯವರ ಕಾಂಗ್ರೆಸ್ ಸರ್ಕಾರ ಯಾವಾಗಲೂ ಬಡವರ ಕಲ್ಯಾಣವನ್ನೇ ಸಾಕಾರಗೊಳಿಸಲು ಶ್ರಮಿಸುತ್ತಿದೆ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.

ನಗರದಲ್ಲಿನ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆಗೆ  ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಪಡೆದು ಕೂರುವುದಲ್ಲ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಮತ್ತಷ್ಟು ಸ್ಫೂರ್ತಿಯಿಂದ ಶ್ರಮಿಸಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆ, ಅನ್ನ ಭಾಗ್ಯ,  ಗೃಹ ಜ್ಯೋತಿ ಹಾಗೂ ಇದೀಗ ಗೃಹ ಲಕ್ಷ್ಮೀ  ಯೋಜನೆಯನ್ನು ಅನುಷ್ಠಾನಗೊಳಿಸಿ, ಇಂದು ಸೌಲಭ್ಯ ವಿತರಿಸಲಾಗುತ್ತಿದೆ. ಈಗಾಗಲೇ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಗೃಹಲಕ್ಷ್ಮೀ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಪ್ರತಿ ಕುಟುಂಬದ ಯಜಮಾನಿ ಮಹಿಳೆಯ ಬ್ಯಾಂಕ್ ಖಾತೆಗೆ ನೇರವಾಗಿ 2 ಸಾವಿರ ಹಣ ಜಮೆ ಆಗಲಿದ್ದು, ತಮ್ಮ ಜೀವನ ನಿರ್ವಹಣೆಗೆ ಈ ಹಣ ಸಹಾಯವಾಗಲಿದೆ. ಕಷ್ಟಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಣ ಕೂಡಿಟ್ಟು ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಮುಂಬರುವ ದಿನಗಳಲ್ಲಿ ಯುವನಿಧಿ ಯೋಜನೆಯಡಿ ಪದವೀಧರರಿಗೆ ಪ್ರೋತ್ಸಾಹ ಧನ ನೀಡಲಾಗವುದು ಎಂದು ಹೇಳಿದರು.

ಫಲಾನುಭವಿಗಳಾದ ಕಲ್ಪನಾ ಹಿರೇಮಠ, ಶೇರಬಾನು ಶೇಖ, ಮಾಧುರಿ ಕಿಲ್ಲೇಕರ್, ಚಿನ್ನಕ್ಕ ಹುಲಿಕವಿ ಹಾಗೂ ಗೀತಾ ವಿರಕ್ತಮಠ ಮಾತನಾಡಿ, ಪ್ರತಿ ತಿಂಗಳು ಎರಡು ಸಾವಿರ ರೂ. ಲಭಿಸುವುದರಿಂದ ಮನೆಯ ಸಣ್ಣಪುಟ್ಟ ಖರ್ಚು ನಿಭಾಯಿಸಲು ಅನುಕೂಲವಾಗಲಿದೆ. ತುರ್ತು ಸಂದರ್ಭಗಳಲ್ಲಿ ಮನೆ ಯಜಮಾನರೇ ಬಂದು ಕೊಡುವ ವರೆಗೂ ಕೈಕಟ್ಟಿ ಕೂಡುವ ಹಾಗೂ ಇನ್ನೊಬ್ಬರ ಬಳಿ ಕೈ ಚಾಚುವ ಅವಶ್ಯಕತೆ ಇಲ್ಲ.  ಮಕ್ಕಳಿಗೆ ಜ್ವರ ನೆಗಡಿ ಬಂದರೂ ಪತಿ ಕೆಲಸದಿಂದ ಮನೆಗೆ ಬರುವ ವರೆಗೂ ಕಾಯುವುದು ತಪ್ಪಿತು. ನಾಲ್ಕೈದು ತಿಂಗಳ ಹಣ ಕೂಡಿಟ್ಟರೆ ಮಕ್ಕಳ ಶಾಲೆ ಶುಲ್ಕವನ್ನೂ ಪಾವತಿಸಲು ನೆರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗೃಹಲಕ್ಷ್ಮೀ ಯೋಜನೆ ಕುರಿತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ವೀಣಾ ಹುಂದ್ರೆ ಪ್ರಥಮ, ಮಹಾಲಕ್ಷ್ಮೀ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ದ್ವಿತೀಯ ಹಾಗೂ ಗಂಗಾ ಕಬಾಡಿ ಅವರು ತೃತೀಯ ಸ್ಥಾನದ ಬಹುಮಾನ ಪಡೆದರು.    
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಸಂಜೀವ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ನಗರ ಪಾಲಿಕೆ  ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ, ಭಾಗ್ಯಶ್ರೀ ಹುಗ್ಗಿ, ನಗರ ಸೇವಕರಾದ ಆಪ್ರೋಜ್ ಮುಲ್ಲಾ, ಶಾಹಿದ್ ಪಠಾಣ್, ರೇಷ್ಮಾ ಬೈರಕದಾರ ಸೇರಿದಂತೆ ಇತರರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net