ಗೃಹಲಕ್ಷ್ಮಿ ನೋಂದಣಿ ಚುರುಕು

11mdk03
Published on

ಮಡಿಕೇರಿ:

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ರಾಜ್ಯಾದ್ಯಂತ ಜಾರಿಗೆ ತರಲು ಭರದ ಸಿದ್ಧತೆ ನಡೆದಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಕೊಡಗಿನಲ್ಲೂ ಗೃಹಲಕ್ಷ್ಮಿ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಮುಂದುವರಿದಿದೆ. ಕೆಲವೆಡೆ ತಾಂತ್ರಿಕ ಅಡಚಣೆಗಳನ್ನು ಹೊರತುಪಡಿಸಿದರೆ ನೊಂದಣಿಗೆ ದೊಡ್ಡ ಮಟ್ಟಿಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಈತನಕ ಶೇ.೭೫.೮೬ರಷ್ಟು ನೋಂದಣಿ ಆಗಿದ್ದು, ರಾಜ್ಯದಲ್ಲಿ ಕೊಡಗು ೨೮ನೇ ಸ್ಥಾನದಲ್ಲಿದೆ.

೨೦೨೩ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಗೃಹ ಲಕ್ಷಿ ಯೋಜನೆ ರೂಪಿಸಿ, ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಠಿಯಿಂದ ಜಾರಿಗೆ ತರಲಾಗಿದೆ ಎಂದು ಯೋಜನೆಯನ್ನು ಬಿಂಬಿಸಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹು ದೊಡ್ಡದು. ಆದ್ದರಿಂದ ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರ ಕುಟುಂಬದ ಯಜಮಾನಿ ಖಾತೆಗೆ ಪ್ರತಿ ತಿಂಗಳು ೨ ಸಾವಿರ ರೂ. ಜಮಾ ಮಾಡಲು ಯೋಜನೆ ಅನುಷ್ಠಾನಕ್ಕೆ ತಂದಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ’ಶಕ್ತಿ’ ಯೋಜನೆ ಜೂನ್‌ನಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಜನಸಾಮಾನ್ಯರಿಗೆ ಉಚಿತ ವಿದ್ಯುತ್ ಕೊಡುವ ’ಗೃಹ ಜ್ಯೋತಿ’ ಯೋಜನೆ ಈ ತಿಂಗಳಿನಿಂದ ಫಲಾನುಭವಿಗಳಿಗೆ ತಲುಪಿದೆ. ಈ ತಿಂಗಳ ೨೭ಕ್ಕೆ ’ಗೃಹಲಕ್ಷ್ಮಿ’ ಯೋಜನೆ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಪ್ರಕಟಿಸಿದ್ದಾರೆ. ಈ ಬೆನ್ನಲ್ಲೇ ’ಗೃಹಲಕ್ಷ್ಮಿ’ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ.

ಗೃಹಲಕ್ಷ್ಮಿ ಯೋಜನೆಗಾಗಿ ಜು. ೧೯ರಿಂದ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಸರ್ಕಾರ ನೇಮಿಸಿರುವ ಸ್ವಯಂಸೇವಕ ಪ್ರಜಾಪ್ರತಿನಿಧಿಗಳು ಕೂಡ ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ. ಗೃಹಲಕ್ಷ್ಮಿಯೋಜನೆ ಅರ್ಜಿಯನ್ನು ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ನೋಂದಣಿ ಮಾಡಲಾಗುತ್ತದೆ. ನೋಂದಣಿ ಯಶಸ್ವಿಯಾದರೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಅಥವಾ ಫಲಾನುಭವಿಯ ಬೇರೆ ಬ್ಯಾಂಕ್ ಖಾತೆಯ ಪಾಸ್‌ಬುಕ್ ನೀಡಿದರೆ ಆ ಬ್ಯಾಂಕ್ ಖಾತೆಗೆ ಹಣ ಪಡೆಯಬಹುದಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಈ ಯೋಜನೆಯ ಅರ್ಹ ಫಲಾನುಭವಿ ಆಗಿರುತ್ತಾರೆ. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಗೃಹಲಕ್ಷ್ಮೀ ಯೋಜನೆಗೆ ಅರ್ಹರಾಗಿರುತ್ತಾರೆ. ಕೆಲವೆಡೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಸಮಸ್ಯೆ ಈಗಲೂ ಮುಂದುವರಿದಿರುವ ದೂರು ಕೇಳಿಬರುತ್ತಿದೆ. ಗ್ರಾಮ ಒನ್‌ನ ಮತ್ತು ಬಾಪೂಜಿ ಸೇವಾ ಕೇಂದ್ರದಲ್ಲಿನ ನೋಂದಣಿ ಪ್ರಕ್ರಿಯೆಗಳಲ್ಲಿ ಕೆಲವೊಂದು ವ್ಯತ್ಯಾಸಗಳಿವೆ ಎಂದು ಹೇಳಲಾಗುತ್ತಿದ್ದು, ಗ್ರಾಮ ಒನ್ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ಸುಲಭದಲ್ಲಿ ಆಗುತ್ತಿದೆ ಎಂದು ಸೈಬರ್ ಸೆಂಟರ್‌ಗ ನಿರ್ವಾಹಕರು ಹೇಳುತ್ತಿದ್ದಾರೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್‌ಗಳಲ್ಲಿ ಚಿಕ್ಕ ಪುಟ್ಟ ಸಮಸ್ಯೆ ಇದ್ದರೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ ಎನ್ನುವ ದೂರುಗಳಿವೆ.

ಯೋಜನೆಯ ನೋಂದಣಿ ಸಂಪೂರ್ಣ ಉಚಿತ, ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇಲ್ಲ ಎಂದು ಸರ್ಕಾರ ಪ್ರಕಟಿಸಿದ್ದರೂ ಕೆಲವು ನೋಂದಣಿ ಕೇಂದ್ರಗಳಲ್ಲಿ ಹಣ ಪಡೆದುಕೊಳ್ಳುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ತಮ್ಮ ಕೆಲಸ ಬೇಗ ಮುಗಿದರೆ ಸಾಕು ಎಂದು ಫಲಾನುಭವಿಗಳೇ ಕೇಂದ್ರದ ನಿರ್ವಾಹಕರಿಕೆ ಹಣ ಕೊಡುವುದು ಕೂಡ ಸಾಮಾನ್ಯವಾಗಿದೆ. ಕೊಡಗಿನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಒಟ್ಟು ೧,೩೧,೮೬೩ ಮಹಿಳೆಯರನ್ನು ನೋಂದಾಯಿಸುವ ಗುರಿ ಸರ್ಕಾರ ಇಟ್ಟುಕೊಂಡಿದೆ. ಈ ತನಕ ೧,೦೦,೦೨೬ ಮಹಿಳೆಯರ ನೋಂದಣಿ ಆಗಿದೆ. ಈ ಮೂಲಕ ಜಿಲ್ಲೆಯಲ್ಲಿ ಶೇ.೭೫.೮೬ರಷ್ಟು ನೋಂದಣಿ ಆದಂತಾಗಿದ್ದು, ಶೇ ೧೦೦ರ ಗುರಿ ಮುಟ್ಟಲು ಪ್ರಯತ್ನ ನಡೆದಿದೆ.

ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಯೋಜನೆಗೆ ಮಂಜೂರಾತಿ ನೀಡಲಾಗುತ್ತದೆ. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ. ಅಲ್ಲದೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಸರ್ಕಾರ ಎಚ್ಚರಿಕೆ ನೀಡಿದೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಂಥವರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅವರಿಗೂ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net