

ಮಡಿಕೇರಿ:
ಜಿಲ್ಲೆಯ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ೨ ಸಾವಿರ ರೂ.ಗಳನ್ನು ನೀಡುವ ಸರ್ಕಾರದ ಪ್ರಮುಖ ಕಾರ್ಯಕ್ರಮ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಚಾಲನೆ ಸಿಕ್ಕಿದೆ. ಜು. ೨೦ ರಿಂದ ಕೊಡಗು ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸಿರುವ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ ಮಾತ್ರ ಅನ್ವಯವಾಗುತ್ತದೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅರ್ಹರಾಗುವುದಿಲ್ಲ.
ಪಡಿತರ ಚೀಟಿಯ ಸಂಖ್ಯೆ, ಯಜಮಾನಿಯ ಹಾಗೂ ಯಜಮಾನಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಯಜಮಾನಿ ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅಥವಾ ಫಲಾನುಭವಿ ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಯ ವಿವರ, ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ನೋಂದಣಿ ವೇಳೆ ಬೇಕಾಗುತ್ತದೆ.
ಫಲಾನುಭವಿಗಳು ಗ್ರಾಮಒನ್, ನಗರ ಪ್ರದೇಶದಲ್ಲಿ ತೆರೆಯಲಾದ ಕೇಂದ್ರಗಳು ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಫಲಾನುಭವಿಗಳು ಕೇಂದ್ರಗಳಲ್ಲದೆ ಪ್ರಜಾಪ್ರತಿನಿಧಿ ಮೂಲಕ ಸಹ ಸೇವಾ ಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಪ್ರತಿ ದಿನ ಅರ್ಹ ಫಲಾನುಭವಿಗಳಿಗೆ (ಬೆಳಗ್ಗೆ ೩೦ ಮತ್ತು ಮಧ್ಯಾಹ್ನ ೩೦ ಮಂದಿಗೆ ಮಾತ್ರ) ಸಮಯ ಹಾಗೂ ನೋಂದಣಿ ಕೇಂದ್ರದ ವಿವರಗಳು ಮೊಬೈಲ್ ಸಂದೇಶದ ಮೂಲಕ ಸ್ವೀಕೃತವಾಗಲಿದ್ದು, ಈ ಸಂದೇಶ ಸ್ವೀಕೃತಗೊಂಡ ಫಲಾನುಭವಿಗಳು ಮಾತ್ರ ಸಂದೇಶದಲ್ಲಿ ವಿವರಿಸಿದ ಸೇವಾ ಕೇಂದ್ರಕ್ಕೆ ನಿಗದಿಪಡಿಸಿದ ಸಮಯಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರತಿ ಫಲಾನುಭವಿಯ ನೋಂದಾವಣಿಗೆ ನಿಗಧಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು ೮೧೪೭೫೦೦೫೦೦ ನಂಬರ್‌ಗೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿ ಅಥವಾ ೧೯೦೨ ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ನಿಗದಿತ ಸಮಯಕ್ಕೆ ಭೇಟಿ ನೀಡಿ ನೋಂದಾವಣೆ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಕಚೇರಿ ಸಮಯದ ನಂತರ (ಸಂಜೆ ೫ ಗಂಟೆ ನಂತರ) ತೆರಳಿ ನೋಂದಾಯಿಸಿಕೊಳ್ಳಬಹುದು. ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಯೋಜನೆಯಡಿ ನೋಂದಾಯಿಸುವ ಫಲಾನುಭಮಿ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಯೋಜನೆಯಡಿ ನೋಂದಾಯಿಸಿಕೊಳ್ಳಲು ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗದಿಪಡಿಸಿರುವುದಿಲ್ಲ.
ಜಿಲ್ಲಾ ಹಾಗೂ ತಾಲೂಕು ಸಹಾಯವಾಣಿ: ಜಿಲ್ಲಾ ಸಹಾಯವಾಣಿ ೦೮೨೭೨-೨೯೮೩೭೯, ೯೫೩೫೬೨೬೦೫೩, ಮಡಿಕೇರಿ ಸಹಾಯವಾಣಿ ೦೮೨೭೨-೨೯೫೦೮೭, ೯೯೮೦೮೯೮೫೨೨, ಸೋಮವಾರಪೇಟೆ ಸಹಾಯವಾಣಿ ೦೮೨೭೬-೨೦೦೦೨೩, ೯೯೮೦೯೫೫೨೫೦, ಕುಶಾಲನಗರ ಸಹಾಯವಾಣಿ ೦೮೨೭೬-೨೦೦೦೨೩, ೯೯೮೦೯೫೫೨೫೦, ವಿರಾಜಪೇಟೆ ಸಹಾಯವಾಣಿ ೭೭೯೫೭೩೨೨೯೫, ಪೊನ್ನಂಪೇಟೆ ಸಹಾಯವಾಣಿ ೭೭೯೫೭೩೨೨೯೫.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ೨೦೩ ಸೇವಾ ಕೇಂದ್ರಗಳಿವೆ. ಮಡಿಕೇರಿ ತಾಲೂಕಿನಲ್ಲಿ ಗ್ರಾಮ ಒನ್ ೨೪, ಬಾಪೂಜಿ ಸೇವಾ ಕೇಂದ್ರ ೨೬, ಸ್ಥಳೀಯ ಸಂಸ್ಥೆ ೦೪ ಒಟ್ಟು ೫೪.
ಸೋಮವಾರಪೇಟೆ ತಾಲೂಕಿನಲ್ಲಿ ಗ್ರಾಮ ಒನ್ ೧೮, ಬಾಪೂಜಿ ಸೇವಾ ಕೇಂದ್ರ ೨೪, ಸ್ಥಳೀಯ ಸಂಸ್ಥೆ ೦೧ ಒಟ್ಟು ೪೩. ಕುಶಾಲನಗರ ತಾಲೂಕಿನಲ್ಲಿ ಗ್ರಾಮ ಒನ್ ೧೭, ಬಾಪೂಜಿ ಸೇವಾ ಕೇಂದ್ರ ೧೬, ಸ್ಥಳೀಯ ಸಂಸ್ಥೆ ೦೩ ಒಟ್ಟು ೩೬. ವಿರಾಜಪೇಟೆ ತಾಲೂಕಿನಲ್ಲಿ ಗ್ರಾಮ ಒನ್ ೧೪, ಬಾಪೂಜಿ ಸೇವಾ ಕೇಂದ್ರ ೧೯, ಸ್ಥಳೀಯ ಸಂಸ್ಥೆ ೦೩ ಒಟ್ಟು ೩೬. ಪೊನ್ನಂಪೇಟೆ ತಾಲೂಕಿನಲ್ಲಿ ಗ್ರಾಮ ಒನ್ ೧೫, ಬಾಪೂಜಿ ಸೇವಾ ಕೇಂದ್ರ ೧೯, ಒಟ್ಟು ೩೪ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.