

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಗೆ ಲಾನುಭವಿಗಳು ನೋಂದಾಯಿಸುವ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಎಲ್ಲಿಯಾದರೂ ಮಧ್ಯವರ್ತಿಗಳು ಹಣದ ಬೇಡಿಕೆ ಇಟ್ಟರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮನವಿ ಮಾಡಿದ್ದಾರೆ.
ಕುಟುಂಬದ ಯಜಮಾನಿಗೆ 2 ಸಾವಿರ ರೂ.ನಗದು ಪಾವತಿಸುವ ಗೃಹಲಕ್ಷ್ಮೀ ಯೋಜನೆ ಜು.19ರಿಂದ ಅನುಷ್ಠಾನಗೊಂಡಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಮಧ್ಯೆ ಕೆಲವು ಕಡೆಗಳಲ್ಲಿ ಮಧ್ಯವರ್ತಿಗಳು ಇದರ ಲಾಭ ಪಡೆಯಲು ಯತ್ನಿಸುತ್ತಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ದೂರು ಕೇಳಿಬರುತ್ತಿದೆ. ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಯಾವುದೇ ಶುಲ್ಕವಿಲ್ಲ ಎಲ್ಲವೂ ಉಚಿತವಾಗಿ ನಡೆಯುವುದರಿಂದ ಜಿಲ್ಲೆಯ ಲಾನುಭವಿಗಳು ಯಾರಿಗೂ ಈ ಯೋಜನೆ ಸಂಬಂಧ ಹಣ ನೀಡುವ ಅವಶ್ಯಕತೆ ಇಲ್ಲ. ಇಂಥ ಸನ್ನಿವೇಶ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಪೊಲೀಸರ ಗಮನಕ್ಕೆ ತರಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ಭಾಗದ ಲಾನುಭವಿಗಳು ಜಿಲ್ಲೆಯಲ್ಲಿರುವ 101 ಬಾಪೂಜಿ ಸೇವಾಕೇಂದ್ರಗಳು, 103 ಗ್ರಾಮ ಒನ್ ಕೇಂದ್ರಗಳಲ್ಲಿ ಹಾಗೂ ನಗರ ಪ್ರದೇಶದ ಜನರು ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಪಿಸಿರುವ 23 ಕೇಂದ್ರಗಳಲ್ಲಿ ಕರ್ನಾಟಕ ಒನ್‌ನ 8 ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈ ಕೇಂದ್ರಗಳಲ್ಲಿ ಎಲ್ಲಿಯಾದರೂ ನೋಂದಣಿ ಪ್ರಕ್ರಿಯೆ ಸಿಬ್ಬಂದಿ ಅಥವಾ ಮತ್ಯಾವುದೇ ವ್ಯಕ್ತಿ ಹಣದ ಬೇಡಿಕೆ ಇಟ್ಟರೆ ತಕ್ಷಣ ದೂರು ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.