

ಚಾಮರಾಜನಗರ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿಗೆ ಚಾಲನೆ ನೀಡಲಾಗಿದ್ದು, ಕಾಂಗ್ರೆಸ್ ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಶನಿವಾರ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಚುನಾವಣೆಗೂ ಮುನ್ನ 5 ಗ್ಯಾರಂಟಿಗಳ ಭರವಸೆ ನೀಡಿದ್ದೆವು. ಶಕ್ತಿ ಯೋಜನೆಯನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳುತ್ತಿದ್ದು, ಜನಪ್ರಿಯತೆ ಗಳಿಸಿದೆ. ಅನ್ನಭಾಗ್ಯದ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡದೆ ಇದ್ದಾಗ ಅಕ್ಕಿ ಬದಲು ನಗದು ಪಾವತಿ ಮಾಡುತ್ತಿದ್ದೇವೆ. ಗೃಹಲಕ್ಷ್ಮೀ ಅನುಷ್ಠಾನಗೊಳ್ಳುತ್ತಿದೆ. ಯುವನಿಧಿಯೂ ಯುವಕ-ಯುವತಿಯರಿಗೆ ನೆರವಾಗಲಿದ್ದು, ಗೃಹಜ್ಯೋತಿಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.
ಗೃಹಜ್ಯೋತಿ ಯೋಜನೆ ಪಡೆಯಬೇಕಾದರೆ ವಿದ್ಯುತ್ ಬಾಕಿಯನ್ನು ಪಾವತಿ ಮಾಡಿರಬೇಕು. ಹೀಗಾಗಿ ಬಾಕಿ ಉಳಿಸಿಕೊಂಡಿರುವವರು ತಪ್ಪದೇ ಹಣ ಸಂದಾಯ ಮಾಡಿ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಅಧಿಕಾರದಲ್ಲಿದ್ದಾಗ ಇದನ್ನೆಲ್ಲಾ ಮಾಡಲಾಗದ ಬಿಜೆಪಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದೆ. ಜೆಡಿಎಸ್ ಕೂಡ ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದು ಮಾಡುತ್ತಿದೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಶೇ. 82ರಷ್ಟು ಜನರು ನೋಂದಾಯಿಸಿಕೊಂಡಿದ್ದಾರೆ. ಬಾಕಿ ಇರುವ ಗ್ರಾಹಕರು ಶೀಘ್ರ ನೋಂದಾಯಿಸಿಕೊಂಡಲ್ಲಿ ಉಚಿತವಾಗಿ ಸೌಲಭ್ಯದ ಪ್ರಯೋಜನ ಪಡೆಯಹುದಾಗಿದೆ. ಗೃಹಜ್ಯೋತಿ ಯೋಜನೆಗೆ ವರ್ಷದ ಸರಾಸರಿ ಬಳಕೆಯ ಯೂನಿಟ್‌ಗಳನ್ನು ಪರಿಗಣಿಸಲಾಗುತ್ತದೆ. ಇದರ ಮೇಲೆ ಶೇ. 10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಅದಕ್ಕನುಗುಣವಾಗಿ ಉಚಿತವಾಗಿ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ವಿದ್ಯುತ್ ದುರುಪಯೋಗ ತಡೆಯಲು ಸರಾಸರಿ ಬಳಕೆಯನ್ನ ಅನುಸರಿಸಲಾಗುತ್ತಿದೆ. ಯೋಜನೆಗೆ ನೋಂದಾಯಿಸಿಕೊಂಡ ಅರ್ಹರೆಲ್ಲರಿಗೂ ಜುಲೈ ತಿಂಗಳ ಬಳಕೆಯ ಶೂನ್ಯ ಬಿಲ್ ಬರಲಿದೆ. ಮುಂದೆಯೂ ನೋಂದಾಯಿಸಿಕೊಂಡಲ್ಲಿ ಯೋಜನೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಒದಗಿಸುವ ಯೋಜನೆಗೆ ಇಂದು ಚಾಲನೆ ನೀಡಿದ್ದೇವೆ ಎಂದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ರಾಜ್ಯ ಸರ್ಕಾರದ ಜಾರಿಗೆ ತಂದ ಯೋಜನೆಗಳು ಎಲ್ಲಾ ವರ್ಗದವರಿಗೆ ತಲುಪುತ್ತಿದೆ. ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿರುವ ಶಕ್ತಿ ಯೋಜನೆ ಮಹಿಳೆಯರಿಗೆ ಸದುಪಯೋಗವಾಗಿದೆ. ಪ್ರಾಮಾಣಿಕವಾಗಿ ಯೋಜನೆಗಳ ಅನುಷ್ಠಾನವಾಗುತ್ತಿದೆ. ಯುವನಿಧಿ ಯೋಜನೆಗೂ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಶಾಸಕರಾದ ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ಡಾ. ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಗಿರಿಜಾ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್, ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಲೋಕೇಶ್, ಕಾರ್ಯನಿರ್ವಾಹಕ ಎಂಜಿನಿಯರ್ ವಸಂತ್ ಕುಮಾರ್ ಇತರರು ಉಪಸ್ಥಿತರಿದ್ದರು.