

ದೊಡ್ಡಬಳ್ಳಾಪುರ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ವಿರುದ್ಧ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ನಗರಸಭೆಯಲ್ಲಿ ವಿ.ಎಸ್ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಭೆಗೆ 11 ಸದಸ್ಯರಲ್ಲಿ ಕೇವಲ ಇಬ್ಬರು ಜೆಡಿಎಸ್ ಸದಸ್ಯರು ಹಾಜರಾಗಿದ್ದರು. ಉಳಿದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಗೈರಾಗುವ ಮೂಲಕ ಸ್ಥಾಯಿ ಸಮಿತಿ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಹಾಜರಿದ್ದ ಪೌರಾಯುಕ್ತ ಕಾರ್ತಿಕೇಶ್ವರ, ನಗರಸಭೆ ಅಧ್ಯೆ ಸುಮಿತ್ರಾ, ಉಪಾಧ್ಯಕ್ಷ ಮಲ್ಲೇಶ್ ಸೇರಿ ಅಧಿಕಾರಿಗಳು 1 ಗಂಟೆಗೂ ಹೆಚ್ಚು ಸದಸ್ಯರ ಆಗಮನಕ್ಕೆ ಕಾದು ಬಳಿಕ ಸಭೆ ಮುಂದೂಡಿದ್ದಾರೆ.
ಸರ್ವಾಧಿಕಾರಿ ಧೋರಣೆ: ಅಧ್ಯಕ್ಷ ರವಿಕುಮಾರ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಾರೆ. ಕೆಲಸ ಹಂಚಿಕೆಯಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ. ಸಣ್ಣಪುಟ್ಟ ವಿಚಾರದಲ್ಲಿಯೂ ಆಕ್ಷೇಪಣೆ ಹೇಳಿ ಕಾಲಹರಣ ಮಾಡುವುದಲ್ಲದೇ ಸುಖಾಸುಮ್ಮನೆ ವಾರ್ಡ್ ಕೆಲಸಗಳನ್ನು ನಿಧಾನ ಮಾಡುತ್ತಾರೆ. ಸೌಜನ್ಯಕ್ಕೂ ಸಮಿತಿಯ ಸದಸ್ಯರನ್ನು ಮಾತನಾಡಿಸುವುದಿಲ್ಲ. ಅವರೇ ಎಲ್ಲವನ್ನೂ ತೀರ್ಮಾನಿಸುತ್ತಾರೆ. ಪ್ರಶ್ನಿಸಿದರೆ ಉತ್ತರ ಕೊಡುವುದಿಲ್ಲ. ಇಂತಹ ಸರ್ವಾಧಿಕಾರಿ ಧೋರಣೆ ಖಂಡಿಸಿ ನಾವು ಇಂದಿನ ಸಭೆಗೆ ಗೈರಾಗಿದ್ದೇವೆ ಎಂದು ಸ್ಥಾಯಿ ಸಮಿತಿ ಸದಸ್ಯ ಪದ್ಮನಾಭ ವಿಜಯವಾಣಿಗೆ ತಿಳಿಸಿದರು.
ಇಂದಿನ ಸ್ಥಾಯಿ ಸಮಿತಿ ಸಭೆಗೆ 14ರಂದು ನೋಟಿಸ್ ನೀಡಲಾಗಿತ್ತು. ಸಭೆಯಲ್ಲಿ ಭಾಗಿಯಾಗಿ ಸದಸ್ಯರಿಗೆ ಫೋನ್ ಮಾಡಿದೆ. ಆದರೆ ಪ್ರತಿಯೊಬ್ಬರು ಒಂದೊಂದು ಕಾರಣ ನೀಡಿದರು. ಒಂದು ಗಂಟೆ ಕಾದು ಸುಸ್ತಾಗಿ ಸಭೆ ಮುಂದೂಡಿದ್ದೇವೆ. > ಸುಮಿತ್ರಾ ಆನಂದ್ ನಗರಸಭೆ ಅಧ್ಯೆ ಸಮಿತಿಯ ಸದಸ್ಯರಿಗೆ ಸಭೆಯ ದಿನಾಂಕವನ್ನು ಮೊದಲೇ ತಿಳಿಸಲಾಗಿತ್ತು. ಕೆಲವು ಸದಸ್ಯರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಭೆಗೆ ಗೈರಾಗಿದ್ದಾರೆ. ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ. > ರವಿಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷ