

ಚಿಕ್ಕಮಗಳೂರು: ಮೊಬೈಲ್, ಟಿವಿ ಅತಿಯಾದ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕ. ಈ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಬಾಲ ನ್ಯಾಯ ಮಂಡಳಿ ಅಧ್ಯಕ್ಷೆ ಕೆ.ಎಸ್.ಶಿಲ್ಪಾ ಸಲಹೆ ನೀಡಿದರು.
ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೆಣ್ಣು ಮಕ್ಕಳ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಅತಿಯಾಗಿ ಮೊಬೈಲ್ ಬಳಕೆ:
ಕರೊನಾ ಲಾಕ್‍ಡೌನ್ ಪರಿಣಾಮವಾಗಿ ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ ಮತ್ತು ಟಿ.ವಿ. ವೀಕ್ಷಣೆ ಮಾಡಿ ಗಮನ ಬೇರೆಡೆ ಹರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದಿನ ಕಾಲದಲ್ಲಿ ಮಕ್ಕಳನ್ನು ಮನೆಯೊಳಗೆ ಕರೆತರಲು ಸಾಹಸಪಡಬೇಕಿತ್ತು. ಆದರೆ ಈಗಿನ ಕಾಲದ ಮಕ್ಕಳನ್ನು ಮನೆಯಿಂದ ಹೊರತರಲು ಪ್ರಯಾಸಪಡುವ ಸ್ಥಿತಿ ಬಂದಿದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಕ್ಷೀಣಿಸಿ ಚಿಕ್ಕ ವಯಸ್ಸಿನಲ್ಲೇ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಹೀಗಾಗಿ ಆರೋಗ್ಯ ಸುಧಾರಿಸಲು ಕ್ರೀಡೆಗಳು ಮುಖ್ಯ ಎಂದು ಹೇಳಿದರು.
ಯಶಸ್ಸು ಸಾಧಿಸಿ ಕೊಡುಗೆ ನೀಡಿ:
ಜಿಪಂ ಸಿಇಒ ಎಸ್.ಪೂವಿತಾ ಮಾತನಾಡಿ, ವಾಲಿಬಾಲ್ ಕ್ರೀಡೆ ಜಿಲ್ಲಾ ಮಟ್ಟಕ್ಕೆ ಸೀಮಿತವಾಗಬಾರದು. ಬದಲಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಯಶಸ್ಸು ಕಂಡಲ್ಲಿ ಕ್ರೀಡಾಕೂಟಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಕರೊನಾ ಪರಿಣಾಮದಿಂದ ಹೆಣ್ಣು ಮಕ್ಕಳು ಹೊರಾಂಗಣ ಕ್ರೀಡಾಂಗಣದಲ್ಲಿ ಪಾಲ್ಗೊಳ್ಳುವುದು ಕಡಿಮೆಯಾಗಿದ್ದು ಇದನ್ನು ಸುಧಾರಿಸಲು ಪ್ರತಿ ತಿಂಗಳು ಒಂದೊಂದು ಕ್ರೀಡೆ ಆಯೋಜಿಸಲು ತೀರ್ಮಾನಿಸಲಾಗಿದೆ. ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುವ ಮೂಲಕ ಇತರರಿಗೂ ಸ್ಫೂರ್ತಿಯಾಗಬೇಕು ಎಂದು ಸಲಹೆ ನೀಡಿದರು.
ಕ್ರೀಡಾಕೂಟದ ತಾಲೂಕು ಮಟ್ಟದ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ತರೀಕೆರೆ, ಬೀರೂರು, ಕಡೂರು, ಎನ್.ಆರ್.ಪುರ, ಕೊಪ್ಪ, ಅಜ್ಜಂಪುರ ತಾಲೂಕು ತಂಡಗಳು ಭಾಗವಹಿಸಿದ್ದವು. ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಲಕ್ಷ್ಮಣ್ ಇತರರಿದ್ದರು.