ವಿರೋಧಿಗಳು ಇದ್ದರೆ ಮಾತ್ರ ಬೆಳೆಯಲು ಸಾಧ್ಯ: ಸಿ.ಇ.ತೀರ್ಥಕುಮಾರ್

8adarshkdga1
Published on

ಮಡಿಕೇರಿ: ಯಾವುದೇ ಸಂಘ, ಸಂಸ್ಥೆಗಳು ಬೆಳೆಯಬೇಕು ಎಂದರೆ ವಿರೋಧಿಗಳಿರಬೇಕು. ವಿರೋಧಿಗಳು ಇದ್ದರೆ ನಾವು ಜೀವನದಲ್ಲಿ ಯಶಸ್ಸು ಕಾಣುತ್ತೇವೆ ಎಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ.ತೀರ್ಥಕುಮಾರ್(ಮೂಡಳ್ಳಿ ರವಿ) ಅಭಿಪ್ರಾಯಪಟ್ಟರು.


ಗಾಂಧಿ ಯುವಕ ಸಂಘ ಕಂಡಕರೆ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಅರ್ಜಿಯನ್ನು ಕಂಡಕರೆಯ ಬ್ರೈಟ್ ಸ್ಪೋರ್ಟ್ಸ್ ಹಾಗೂ ರಿಕ್ರಿಯೇಶಷನ್ ಕ್ಲಬ್ ಬ್ಯಾಡ್ಮಿಂಟನ್ ಮೈದಾನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಸಂಘ-ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸ. ಸಮಾಜ ಸೇವೆ ಮಾಡುವಾಗ ಅಪಪ್ರಚಾರಗಳು ಸಹಜ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ,ಸಂಘದ ಉದ್ದೇಶ, ಗುರಿಯನ್ನು ಮುಟ್ಟಬೇಕು. ಒಳ್ಳೆಯ ಕಾರ್ಯಕ್ರಮಗಳು ಮಾಡುವಾಗ ನಾಲ್ಕು ಜನರು ಅಡ್ಡಬರುವುದು ಸಹಜ. ರಾಜಕೀಯ ರಹಿತವಾಗಿ ಗಾಂಧಿ ಯುವಕ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.


ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಗುತ್ತಿಗೆದಾರ ಸಿ.ಕೆ.ಶಂಶುದ್ದೀನ್, ಕಂಡಕರೆ ಗ್ರಾಮದ ಯುವಕರು ಗಾಂಧಿ ಯುವಕ ಸಂಘವನ್ನು ಸ್ಥಾಪಿಸಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುವುದು ಹೆಮ್ಮೆಯ ವಿಷಯ. ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡದೆ ಗಾಂಧಿ ಯುವಕ ಸಂಘ ಮುನ್ನಡೆಯುತ್ತಿದೆ. ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ನಡೆಸುತ್ತಿರುವುದು ಶ್ಲಾಘನೀಯ ಹಾಗೂ ಇಡೀ ಕಂಡಕರೆ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದು ಭರವಸೆ ನೀಡಿದರು.


ಫ್ರೀ ಬ್ರೈಡಲ್ ಬೋಟಿಕ್ ಸಂಸ್ಥೆಯ ಮುಖ್ಯಸ್ಥ, ಸಮಾಜ ಸೇವಕಿ ಶಹರುಬಾನು ಮಾತನಾಡಿ, ಇದೇ ಮೊದಲ ಬಾರಿಗೆ ಚೆಟ್ಟಳ್ಳಿ ಗ್ರಾಮದಲ್ಲಿ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತಿರುವುದು ಎಲ್ಲರಿಗೂ ಮಾದರಿ. ಕಂಡಕರೆಯ ಗಾಂಧಿ ಯುವಕ ಸಂಘದವರು ಎಲ್ಲಾ ಜಾತಿ, ಧರ್ಮವರನ್ನು ಒಂದೇ ವೇದಿಕೆಗೆ ಕರೆತರುವುದು ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗಿದೆ. ಸಂಘವನ್ನು ಸ್ಥಾಪಿಸುವುದು ಸುಲಭದ ವಿಷಯ. ಆದರೆ, ಸಂಘವನ್ನು ಮುನ್ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಆದರೆ, ಗಾಂಧಿ ಯುವಕ ಸಂಘದವರು ಅಚ್ಚುಕಟ್ಟಾಗಿ ನಡೆಸಿಕೊಂಡು, ಬಡವರಿಗೆ ಸಹಾಯ ಮಾಡುತ್ತಿರುವುದು ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ಯುವಕ ಸಂಘ ಹಾಗೂ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಸಮಿತಿಯ ಅಧ್ಯಕ್ಷ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಸೌಹಾರ್ದತೆ ನಮ್ಮ ಉದ್ದೇಶ. ಸೌಹಾರ್ದತೆ ನಮ್ಮ ಸಂದೇಶ ಎಂಬ ಘೋಷವಾಕ್ಯದೊಂದಿಗೆ ಇದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಶನಿವಾರದಿಂದ ಅಧಿಕೃತವಾಗಿ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಅರ್ಜಿ ವಿತರಣೆಯಾಗಲಿದೆ. ಅರ್ಹ ಬಡ ಹೆಣ್ಣುಮಕ್ಕಳನ್ನು ಗುರುತಿಸುವ ಉದ್ದೇಶದಿಂದ ಅರ್ಜಿ ವಿಲೇವಾರಿ ಸಮಿತಿಯನ್ನು ಪ್ರತ್ಯೇಕವಾಗಿ ರಚನೆ ಮಾಡಿದ್ದೇವೆ. ಅರ್ಜಿಯಲ್ಲಿ ಅಚ್ಚುಕಟ್ಟಾಗಿ ನಿಯಮಗಳನ್ನು ನೀಡಿದ್ದೇವೆ. ಯಾವುದೇ ಅಪಪ್ರಚಾರಗಳು, ವೈಯಕ್ತಿಕ ಟೀಕೆಗಳು, ಎಷ್ಟೇ ವಿರೋಧಿಗಳು ಇದ್ದರೂ ಕೂಡ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತೇವೆ. ಇಲ್ಲಸಲ್ಲದ ಆರೋಪಗಳು, ಅಪಪ್ರಚಾರಗಳು ಹಾಗೂ ವಿರೋಧಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.


ಕಾರ್ಯಕ್ರಮವನ್ನು ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ, ಪಿ.ಎಂ.ಷರೀಫ್ ನಿರೂಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಯುವಕ ಸಂಘದ ಹಿರಿಯ ಉಪಾಧ್ಯಕ್ಷ ಹಾಗೂ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳು ಸಾಮೂಹಿಕ ವಿವಾಹ ಆಚರಣಾ, ಅರ್ಜಿ ವಿಲೇವಾರಿ ಸಮಿತಿಯ ಸಂಚಾಲಕ ಓ.ಎಸ್.ಸುಹೈಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಸ್ಜಿದ್ ತಖ್ವಾ ಮುಸ್ಲಿಂ ಜಮಾಹತ್ ಸ್ವಲಾತ್ ಕಮಿಟಿ ಅಧ್ಯಕ್ಷ ಕೆ.ಎ.ಉಸೈನ್, ಗ್ರಾಮಸ್ಥರಾದ ಓ.ಮ್.ಶುಕ್ಕೂರ್, ಪಿ.ಎಚ್.ಮುಸ್ತಫಾ, ಅಶ್ರಫ್ ಗಾಂಧಿ ಯುವಕ ಸಂಘ ಉಪಾಧ್ಯಕ್ಷ ಕೆ.ಎಂ.ಉನೈಸ್, ಸವಾದ್ ಉಸ್ಮಾನ್, ಕಾರ್ಯದರ್ಶಿ ಕೆ.ಎಂ.ಇರ್ಷಾದ್ ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net