ಗಿಡಗಳನ್ನು ಬೆಳೆಸಿದ್ದು ಖುಷಿ ಕೊಟ್ಟಿದೆ

29 M.D.R.4
Published on

ಮದ್ದೂರು: ರಸ್ತೆ ಬದಿಯಲ್ಲಿ ನೂರಾರು ಮರಗಳನ್ನು ಕಷ್ಟಪಟ್ಟು ನಾನು ಮತ್ತು ನನ್ನ ಪತಿ ಬೆಳೆಸಿದ್ದು ನಮಗೆ ಅತ್ಯಂತ ಹೆಮ್ಮೆ ಮತ್ತು ಖುಷಿಯನ್ನು ತಂದಿದೆ ಎಂದು ವೃಕ್ಷಮಾತೆ ಡಾ.ಸಾಲುಮದ ತಿಮ್ಮಕ್ಕ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬುಧವಾರ ಸುಮುಖ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ, ಆರೋಗ್ಯ ಉಚಿತ ತಪಾಸಣೆ, ಸಸಿ ವಿತರಣೆ, ಸರ್ಕಾರಿ ಶಾಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು.

25 ವರ್ಷಗಳು ನಮಗೆ ಮಕ್ಕಳು ಆಗಲಿಲ್ಲ. ಈ ಚಿಂತೆಯಲ್ಲಿದ್ದ ನಮಗೆ ಮಕ್ಕಳಿಲ್ಲ ಎಂಬ ಚಿಂತೆಯನ್ನು ಬಿಟ್ಟು ರಸ್ತೆ ಬದಿಯಲ್ಲಿ ಮೊದಲಿಗೆ 10 ಸಸಿಗಳನ್ನು ಹಾಕಲಾಯಿತು. ನಾನು ಸೊಂಟ ಮತ್ತು ತಲೆ ಮೇಲೆ ನೀರನ್ನು ಎತ್ತಿಕೊಂಡು ಬಂದು ಸಸಿಗಳಿಗೆ ಹಾಕುತ್ತಿದೆ. ನಮ್ಮ ಪತಿಯೂ ಇದಕ್ಕೆ ಸಹಕಾರ ನೀಡಿದರು. ನಂತರ ರಸ್ತೆ ಬದಿಯಲ್ಲಿ ನೂರಾರು ಸಸಿಗಳನ್ನು ನೆಟ್ಟೆವು. ಅವುಗಳ ಹೆಮ್ಮರವಾಗಿ ಬೆಳೆದವು. ಇದನ್ನು ಗಮನಿಸಿದ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಹಲವಾರು ಸಂಘ, ಸಂಸ್ಥೆಗಳು ಹಲವು ರೀತಿಯಲ್ಲಿ ಸನ್ಮಾನ, ಬಿರುದುಗಳನ್ನು ನೀಡಿ ಕಷ್ಟದಲ್ಲಿದ್ದ ನಮಗೆ ಸಹಾಯ ಮಾಡಿದವು ಎಂದು ತಿಳಿಸಿದರು.

ಮಾನವವ ಉಳಿವಿಗೆ ಕೆರೆ, ಕಟ್ಟೆಗಳು, ಕಲ್ಯಾಣಿಗಳು, ದುಂಡು ತೋಪುಗಳು, ಅರಣ್ಯವನ್ನು ರಕ್ಷಣೆ ಮಾಡಬೇಕು. ಪ್ರತಿಯೊಬ್ಬರೂ ಒಂದೊಂದು ಸಸಿಗಳನ್ನು ನೆಟ್ಟು ಅದನ್ನು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಾತನಾಡಿ, ಸಮಾಜದ ಅಭ್ಯುದಯಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು. ನೆಲ, ಜಲ, ಭಾಷೆ ಹಾಗೂ ಪರಿಸರ ಉಳಿವಿಗೆ ಶ್ರಮಿಸಬೇಕು ಮತ್ತು ಮಕ್ಕಳನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ಪಾಲಕರು ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಟಿ.ಸಿ.ರಘು ಮಾತನಾಡಿ, ಪರಿಸರ ಕಾಳಜಿ, ಆರೋಗ್ಯ ಸೇವೆ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ, ಜಲ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡುವುದು ಟ್ರಸ್ಟ್‌ನ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಪಟ್ಟಣದ ಶ್ರೀಮದ್ದೂರಮ್ಮ ದೇವಾಲಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಡಾ.ಸಾಲುಮರದ ತಿಮ್ಮಕ್ಕ ಚಾಲನೆ ನೀಡಿದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಚಿಕಿತ್ಸೆ ಪಡೆದುಕೊಂಡರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಗೌರವ ಅಧ್ಯಕ್ಷ ಡಾ.ಬಿ.ಪಿ.ಮಹೇಶ್, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿದರು.
ಕಿರುತೆರೆ ನಟ ದರ್ಶನ್ ಸೂರ್ಯ, ದೊನ್ನೆ ಬಿರಿಯಾನಿ ಹೌಸ್‌ನ ಬಬ್ಲುಗೌಡ, ಬಿಇಒ ಮಹದೇವು, ಸಿಪಿಐ ಪ್ರಸಾದ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಇ.ಒ. ನಂದಿನಿಸೇಠ್, ಮಾಜಿ ಸೈನಿಕ ಮಲ್ಲರಾಜು, ಟ್ರಸ್ಟ್ ಉಪಾಧ್ಯಕ್ಷ ಕೆ.ಆರ್.ಕುಮಾರ್, ಕಾರ್ಯದರ್ಶಿ ಮಹೇಶ್, ಸಹ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಸತೀಶ್, ಸಂಚಾಲಕ ಪೊಲೀಸ್ ಸಿದ್ದರಾಜು, ಲೆಕ್ಕ ಪರಿಶೋಧಕ ಶಂಕರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net