ಬರಿಗೈಲಿ ವಾಪಸಾದ ಬೆಳೆಗಾರರು

3
ದೊಡ್ಡಬಳ್ಳಾಪುರದ ಎಪಿಎಂಸಿ ಆವರಣದಲ್ಲಿನ ರೈತ ಭವನದಲ್ಲಿ ರಾಗಿ ಖರೀದಿ ನೋಂದಣಿ ಕುರಿತಂತೆ ರೈತರಿಗೆ ಯಾವುದೇ ಮಾಹಿತಿ ಇಲ್ಲದಿರುವುದನ್ನು ಖಂಡಿಸಿ ಪ್ರತಿಭಟಿಸಿದರು. ಮುಖಂಡರಾದ ಹೊನ್ನಘಟ್ಟ ಮಹೇಶ್, ಸಿಎಂ ಹನುಮಂತರಾಯಪ್ಪ, ರಾಜಣ್ಣ, ಚನ್ನೇಗೌಡ, ಸಂದೀಪ್, ಕೆಂಪೇಗೌಡ ಇತರರು ಇದ್ದರು.
Published on

ದೊಡ್ಡಬಳ್ಳಾಪುರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ

ದೊಡ್ಡಬಳ್ಳಾಪುರ : ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಮಾಡಿಸಲು ನಗರದ ರೈತ ಭವನದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಗೆ ಬಂದ ಬೆಳೆಗಾರರು ಯಾವುದೇ ಸಿದ್ಧತೆ ಹಾಗೂ ಅಧಿಕಾರಿಗಳು ಇಲ್ಲದೆ ಇರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ ಹೊನ್ನಾಘಟ್ಟ ಮಹೇಶ್ ಮಾತನಾಡಿ, ಡಿ.4ರಿಂದ ರಾಗಿ ಖರೀದಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಶಿವಶಂಕರ್ ಅವರು ತಿಳಿಸಿದ್ದರು. ಅಲ್ಲದೆ, ದೇವನಹಳ್ಳಿಯಲ್ಲಿ ಬುಧವಾರ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ರಾಗಿ ಖರೀದಿ ಕೇಂದ್ರ ಮತ್ತು ನೋಂದಣಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ರಾಗಿ ಖರೀದಿಗೆ ಅಗತ್ಯವಿರುವ ಎಲ್ಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ತಾಲೂಕಿನಲ್ಲಿ ಯಾವುದೇ ಸಿದ್ಧತೆ ಕೈಗೊಂಡಿಲ್ಲ ಎಂದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ರೈತ ಭವನದ ಬಳಿ ಕನಿಷ್ಠ ಒಂದು ಸೂಚನಾ ಫಲಕ ಇಲ್ಲದೆ ಇರುವುದು ವಿಪರ್ಯಾಸ. ನೂರಾರು ರೈತರು ಬಂದು ಕನಿಷ್ಠ ಮಾಹಿತಿಯೂ ಇಲ್ಲದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ ಎಂದರು.

ರೈತ ರಾಜಣ್ಣ ಮಾತನಾಡಿ, ಪ್ರತಿ ವರ್ಷವು ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ರಾಗಿ ಖರೀದಿಗೆ ನೋಂದಣಿ ಪ್ರಕ್ರಿಯೆ ನಡೆಯುತಿತ್ತು. ಇಲ್ಲಿನ ಆಹಾರ ಇಲಾಖೆ ವತಿಯಿಂದ ಬ್ಯಾನರ್ ಕಟ್ಟುವ ಮೂಲಕ ನೋಂದಣಿ ಸಮಯ, ನೋಂದಣಿಗೆ ಅಗತ್ಯ ಇರುವ ದಾಖಲೆ, ನೋಂದಣಿ ನಂತರ ಯಾವ ದಿನಾಂಕದಿಂದ ರಾಗಿ ಖರೀದಿ ನಡೆಯಲಿದೆ ಎಂಬ ಮಾಹಿತಿಯನ್ನು ಪ್ರಚಾರ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಈ ಯಾವುದೇ ಮಾಹಿತಿಯು ಇಲ್ಲದೆ ರೈತರು ಎಪಿಎಂಸಿಯಲ್ಲಿನ ರೈತ ಭವನಕ್ಕೆ ಬಂದು ಬರಿಗೈಲಿ ಹೋಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net