ಅಕಾಲಿಕ ಮಳೆಗೆ ಬೆಳೆಗಾರರು ಕಂಗಾಲು

Growers panic due to untimely rains
Published on

ಮಡಿಕೇರಿ:

ಬದಲಾಗುತ್ತಿರುವ ಹವಾಮಾನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಕೃಷಿ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದೀಗ ವಾಯುಭಾರ ಕುಸಿತದ ಪರಿಣಾಮದಿಂದ ಸುರಿಯುತ್ತಿರುವ ಮಳೆ ಈ ವರ್ಷ ಮಾತ್ರವಲ್ಲದೆ ಮುಂದಿನ ವರ್ಷವೂ ಕಾಫಿ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಅಕಾಲಿಕ ಹೂವು ಅರಳುವುದು, ಕಾಫಿ ಹಣ್ಣಾಗುವುದು, ಫಸಲು ಕೊಯ್ಲಿಗೆ ಬರುವುದು ಮತ್ತಿತರ ಬೆಳವಣಿಗೆ ಆಗುತ್ತಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಒಟ್ಟು 4,106 ಚ.ಕಿ.ಮೀ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಕೊಡಗಿನಲ್ಲಿ 1,197 ಚ.ಕಿ.ಮೀ ಪ್ರದೇಶದ 1,06,921 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತದೆ. ಇದು ಕರ್ನಾಟಕದ ಒಟ್ಟು ಕಾಫಿ ಬೆಳೆಯುವ ಪ್ರದೇಶದ ಶೇ. 44ರಷ್ಟಿದೆ. ಜಿಲ್ಲೆಯ ಬಹುತೇಕ ಕಾಫಿ ತೋಟಗಳು 10 ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣದ ಸಣ್ಣ ಬೆಳೆಗಾರರ ಒಡೆತನದಲ್ಲಿದೆ. ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 1,10,730 ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲಾಗುತ್ತದೆ. ಇದು ರಾಜ್ಯದ ಶೇ. 50 ಮತ್ತು ದೇಶದ ಕಾಫಿ ಉತ್ಪಾದನೆಯ ಶೇ.35 ರಷ್ಟಿದೆ. ಕಾಫಿಯು ಕೃಷಿ ಕಾರ್ಮಿಕ ಆಧಾರಿತವಾಗಿರುವುದರಿಂದ ಕೊಡಗಿನ ಕಾಫಿ ತೋಟಗಳಲ್ಲಿ ಶೇ.51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ.

ಕಾಫಿ ಮಂಡಳಿ ಮೂಲಗಳ ಪ್ರಕಾರ 2023-24ನೇ ಸಾಲಿನಲ್ಲಿ ಕೊಡಗಿನಲ್ಲಿ ಒಟ್ಟು 21,060 ಮೆಟ್ರಿಕ್ ಟನ್ ಅರೆಬಿಕಾ ಕಾಫಿ, 1,09,225 ಮೆಟ್ರಿಕ್ ಟನ್ ರೋಬಸ್ಟಾ ಕಾಫಿ ಸೇರಿದಂತೆ ಒಟ್ಟು 1,30,285 ಮೆಟ್ರಿಕ್ ಟನ್ ಕಾಫಿ ಬೆಳೆಯುವ ಗುರಿ ಹೊಂದಲಾಗಿದೆ. ಆದರೆ ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕಾಣಿಸಿಕೊಂಡ ಅಕಾಲಿಕ ಮಳೆ ಈ ಬಾರಿಯ ಕಾಫಿ ಉತ್ಪಾದನೆ ಮೇಲೆ ದೊಡ್ಡ ಮಟ್ಟದ ದುಷ್ಪರಿಣಾಮ ಉಂಟುಮಾಡುವ ಆತಂಕ ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಕೊಯ್ಲು ಕಾರ್ಯ ಈಗಾಗಲೇ ಬಹುತೇಕ ಮುಗಿದಿದೆ. ರೋಬಸ್ಟಾ ಕಾಫಿ ಕೊಯ್ಲು ಭರದಿಂದ ನಡೆಯುತ್ತಿದೆ. ಆದರೆ ಆಗಾಗ್ಗೆ ಸುರಿಯುವ ಕೊಯ್ಲು ಕಾರ್ಯಕ್ಕೆ ಅಡ್ಡಿಯಾಗಿದೆ. ಮಳೆಯಿಂದಾಗಿ ಗಿಡದಿಂದ ಕಾಫಿ ಹಣ್ಣುಗಳು ಉದುರುತ್ತಿದ್ದರೆ, ಕೊಯ್ಲು ಮಾಡಿದ ಕಾಫಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಅಕಾಲಿಕ ಮಳೆಯಿಂದ ಕಾಫಿ ಕೊಯ್ಲಿಗೆ ಮೊದಲೇ ಗಿಡಗಳಲ್ಲಿ ಹೂವು ಅರಳಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮುಂದಿನ ವರ್ಷ ಫಸಲು ಕೊಡಬೇಕಾದ ಹೂವು ಈ ವರ್ಷದ ಕಾಫಿ ಕೊಯ್ಲು ವೇಳೆ ಉದುರಿದರೆ ಮುಂದಿನ ವರ್ಷ ಕಾಫಿ ಇಳುವರಿ ಇಳಿಮುಖ ಆಗಲಿದೆ.
ಅಕಾಲಿಕ ಮಳೆಯ ಕಾರಣದಿಂದ ಬೆಳೆಗಾರರು ಆದಷ್ಟು ಬೇಗ ಕಾಫಿ ಕೊಯ್ಲು ಮಾಡಲು ಆತುರ ತೋರಿಸುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೂ ಬೇಡಿಕೆ ಸೃಷ್ಟಿಯಾಗಿದೆ. ನಿಗದಿತ ಸಮಯಕ್ಕೆ ಕಾರ್ಮಿಕರ ಲಭ್ಯತೆ ಇಲ್ಲದೆ ಕಾಫಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.

ಕಾಫಿ ಬೆಳೆಗಾರರ ಸಮಸ್ಯೆಗಳು ಬೇಕಾದಷ್ಟಿದೆ. ಅಕಾಲಿಕ ಮಳೆ, ಅತಿವೃಷ್ಠಿ, ಅನಾವೃಷ್ಠಿಯಿಂದ ಕಾಫಿ ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಕಾಫಿ ತೋಟಗಳು ರೋಗಪೀಡಿತವಾಗುತ್ತಿವೆ. ನಿರ್ವಹಣಾ ವೆಚ್ಚ ಜಾಸ್ತಿಯಾಗಿದೆ. ಹೇಗೆ ಕಾಫಿ ಬೆಳೆಗಾರ ತೋಟದ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದೇ ಆಶ್ಚರ್ಯ. ಇನ್ನಾದರೂ ಕಾಫಿ ಉದ್ಯಮಕ್ಕೆ ವಿಶೇಷ ಪ್ಯಾಕೇಜ್ ಸರ್ಕಾರ ಘೋಷಿಸಲಿ.
ಎಚ್.ಆರ್. ಪವಿತ್ರ, ಕಾಫಿ ಬೆಳೆಗಾರರು, ಸೋಮವಾರಪೇಟೆ.

ಅಕಾಲಿಕ ಮಳೆಯಿಂದ ಈಗ ಶೇ.50ರಷ್ಟು ಕಾಫಿ ಫಸಲು ಮಣ್ಣು ಸೇರಿದೆ. ಕಾರ್ಮಿಕರ ಸಮಸ್ಯೆಯಿಂದ ಇವತ್ತಿಗೂ ಶೇ.50ರಷ್ಟು ಮಂದಿ ಕಾಫಿ ಕೊಯ್ಲು ಮಾಡಲಾಗಿಲ್ಲ. ಮಳೆ ಬಿದ್ದು ಅಕಾಲಿಕವಾಗಿ ಕಾಫಿ ಹೂ ಅರಳುತ್ತಿದೆ. ಹೂ ಅರಳುವ ಜಾಗದಲ್ಲಿ ಚಿಗುರು ಬರುತ್ತಿದೆ. ಅರೇಬಿಕಾ ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸದಿದ್ದರೆ, ಕಾಫಿ ಕೃಷಿಯೇ ನಾಶವಾಗುತ್ತದೆ.
ಮನೋಹರ್, ಕಾಫಿ ಬೆಳೆಗಾರ, ಯಡೂರು ಗ್ರಾಮ.

ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಎಲ್ಲ ರೀತಿಯಲ್ಲೂ ತೊಂದರೆಗೆ ದೂಡುತ್ತಿದೆ. ಕಾಫಿ ಕಿತ್ತು ತಂದು ಕಣದಲ್ಲಿ ಒಣಗಿಸಲು ಹಾಕಿದರೆ, ಮಳೆ ಬಂದು ಕಾಫಿ ಬೀಜಗಳಿಗೆ ಫಂಗಸ್ ಹಿಡಿಯುತ್ತಿದೆ. ಒಂದು ಕಡೆ ಕೆಲಸಗಾರರು ಸಿಗುವುದಿಲ್ಲ. ಜತೆಗೆ ಪ್ರಕೃತಿ ವಿಕೋಪದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ಇತ್ತೀಚೆಗೆ ಗೊಬ್ಬರ, ಕೀಟನಾಶಕಗಳ ದರ ಹೆಚ್ಚಾಗಿದೆ. ಸರ್ಕಾರ ಕೂಡಲೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು.
ಬೋಸ್ ಮೊಣ್ಣಪ್ಪ, ಕಾಫಿ ಬೆಳೆಗಾರ, ಕುಶಾಲನಗರ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹೆಚ್ಚಾಗುತ್ತಿರುವ ಉಷ್ಣತೆ ಕಾಫಿ ಗಿಡಗಳ ಫಲ ನೀಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ಆಗಾಗ್ಗೆ ಸುರಿಯುವ ಮಳೆಯಿಂದಾಗಿ ಹೂವುಗಳು ಅರಳುವ ಮೂಲಕ ಕಾಫಿ ಬೆಳೆ ಹಾನಿಗೆ ಒಳಗಾಗುತ್ತಿದೆ. ನಿಯಮಿತವಾಗಿ ಈ ವರ್ಷ ಹಣ್ಣುಗಳು ಏಕರೂಪವಾಗಿ ಹಣ್ಣಾಗಿಲ್ಲ. ಇದರಿಂದಾಗಿ ರೈತರು ಕೊಯ್ಲು ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಕಾಫಿಯ ತೂಕ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
ಪಾಂಡAಡ ಜೆ. ನರೇಶ್, ಕಾಫಿ ಬೆಳೆಗಾರ, ಯಾವಕಪಾಡಿ ಗ್ರಾಮ, ಕಕ್ಕಬೆ

ಆಕಾಲಿಕ ಮಳೆ ಕಾಫಿ ಗಿಡಗಳಿಗೆ ತುಂಬಾ ಹಾನಿ ಮಾಡುತ್ತಿದೆ. ಇದರಿಂದಾಗಿ ಈಗಾಗಲೇ ಕಾಫಿ ಗಿಡಗಳಲ್ಲಿ ಹೂ ಕಾಣಿಸಿಕೊಂಡಿದೆ. ಅಲ್ಲದೆ ಗಿಡದಲ್ಲಿ ಇರುವ ಕಾಫಿ ಫಸಲು ಕೊಯ್ಲು ಮಾಡಲು ಸಮಸ್ಯೆ ಆಗುತ್ತಿದೆ. ಈಗ ಬರುತ್ತಿರುವ ಮಳೆಯಿಂದ ಕಾಫಿ ಬೆಳೆಗಾರರಿಗೆ ಯಾವುದೇ ಪ್ರಯೋಜನವಿಲ್ಲ.
ಟಿ.ಕೆ. ಸಾಯಿಕುಮಾರ್, ಮಾಲೀಕ, ಮ್ಯಾಗಡೂರ್ ತೋಟ, ಕಂಬಿಬಾಣೆ

ಕಾಫಿ ಬೆಳೆ ಜಿಲ್ಲೆಯ ರೈತರ ಮುಖ್ಯ ಆದಾಯ ಮೂಲವಾಗಿದೆ. ಆದರೆ ಇತ್ತೀಚೆನ ವರ್ಷಗಳಲ್ಲಿ ಆಗುತ್ತಿರುವ ಹವಾಮಾನ ವೈಪರೀತ್ಯದಿಂದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ. ರೈತರಿಗೆ ಸಂಕಷ್ಟ ಆಗುತ್ತಿದೆ. ಅಕಾಲಿಕ ಮಳೆಗೆ ಹೂವು ಸರಿಯಾಗಿ ಅರಳದೆ. ಕೊಯ್ಲು ಸಮಯದಲ್ಲಿಯೂ ಏರುಪೇರಾಗಿ ಖರ್ಚು ಜಾಸ್ತಿ ಆಗುತ್ತಿದೆ.
ವಾಣಿ ಧನೇಶ್, ಶಿಕ್ಷಕಿ

ಮೊದಲೆಲ್ಲ ಒಂದೇ ಬಾರಿಗೆ ಕಾಫಿ ಹೂವು ಅರಳಿ ಒಂದೇ ಬಾರಿಗೆ ಹಣ್ಣಾಗುತಿತ್ತು. ಇದರಿಂದ ರೈತರಿಗೂ ಅನುಕೂಲವಾಗುತ್ತಿತ್ತು. ಆದರೆ ಈಗ ಕಾಫಿ ಹಣ್ಣು ಗಿಡದಲ್ಲಿ ಇರುವಾಗಲೇ ಅಕಾಲಿಕ ಮಳೆಯಿಂದ ಮುಂದಿನ ವರ್ಷದ ಹೂವು ಅರಳಿರುತ್ತದೆ. ರೈತರಿಗೆ ಈ ಬಾರಿಯ ಕಾಫಿಯನ್ನು ಸೂಕ್ಷ್ಮವಾಗಿ ಕುಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸವೂ ಜಾಸ್ತಿ, ಕೂಲಿಯೂ ಹೆಚ್ಚು ನೀಡಬೇಕಾಗುತ್ತದೆ. ರೈತರಿಗೆ ಇದು ಹೊರೆಯಾಗಿದೆ.
ಬಿ.ಎಸ್. ಚಂದ್ರಶೇಖರ್ (ರಾಜ), ಕಾಫಿ ಬೆಳೆಗಾರ, ಗೋಣಿಕೊಪ್ಪ

ಅಕಾಲಿಕ ಮಳೆಯಿಂದ ಕಾಫಿಗೆ ತೊಂದರೆ ಆಗಿದ್ದು. ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆಗಳಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ವರ್ಷ ಕಾಫಿ ಹಣ್ಣು ಕೊಯ್ಲಿಗೆ ಮುನ್ನವೇ ಕಾಫಿ ಗಿಡದಲ್ಲಿ ಹೂ ಅರಳಿದೆ. ಇದರಿಂದ ಈ ವರ್ಷ ಕಾಫಿಗೆ ತೊಂದರೆ ಆಗಿದೆ. ಕಾಫಿಗೆ ಬೆಲೆ ಇದ್ದರೂ ಕಾಫಿ ಈ ಬಾರಿ ನೆಲಕ್ಕುರುಳಿದೆ.
ಬಿ. ರಾಮಯ್ಯ, ಕಾಫಿ ಬೆಳೆಗಾರ, ಕಣಿವೆ ಬಸವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net