ಕೋಮಾರ್ಕ್ ಪುನಶ್ಚೇತನಕ್ಕೆ ಸಹಕರಿಸಲು ರೈತರಿಗೆ ಮನವಿ

web 1
Published on

ಮೂಡಿಗೆರೆ: ತಾಲೂಕಿನ ಬೆಳೆಗಾರರು ಕೋಮಾರ್ಕ್ ಸಂಸ್ಥೆಗೆ ಕಾಫಿ ಮತ್ತು ಕಾಳುಮೆಣಸು ಪೂರೈಕೆ ಮಾಡಿ ಸಂಸ್ಥೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಂಸ್ಥೆ ಅಧ್ಯಕ್ಷ ಅರೆಕುಡಿಗೆ ಶಿವಣ್ಣ ಮನವಿ ಮಾಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಕಾಫಿ ಮತ್ತು ಕಾಳುಮೆಣಸು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೋಮಾರ್ಕ್ ಸಂಸ್ಥೆ ಹಲವಾರು ವರ್ಷಗಳಿಂದ ಕಾಫಿ ಬೆಳೆಗಾರರಿಗೆ ಸೇವೆ ನೀಡುತ್ತಿದೆ. ಬೆಳೆಗಾರರ ಹಿತದೃಷ್ಟಿಯಿಂದ ಇಲ್ಲಿನ ಎಪಿಎಂಸಿ ಆವರಣದಲ್ಲಿ ಕಾಫಿ ಖರೀದಿ ಕೇಂದ್ರ ಆರಭಿಸಲಾಗಿದೆ ಎಂದು ತಿಳಿಸಿದರು.

ಕೋಮಾರ್ಕ್ ಸಂಸ್ಥೆ ಬಹುರಾಜ್ಯ ಸಹಕಾರ ಸಂಸ್ಥೆಯಾಗಿದ್ದು ಇದನ್ನು ಪುನಶ್ಚೇತನಗೊಳಿಸಲು ಕಾಫಿ ಬೆಳೆಗಾರರು ಸಂಸ್ಥೆಗೆ ಕಾಫಿ ಮತ್ತು ಕಾಳುಮೆಣಸು ಪೂರೈಕೆ ಮಾಡಬೇಕು. ಇದರಿಂದ ಸಂಸ್ಥೆ ಅಭಿವೃದ್ಧಿಯಾಗಿ ಮುಂದಿನ ದಿನಗಳಲ್ಲಿ ಬೆಳೆಗಾರರಿಗೆ ಉತ್ತಮ ಬೆಲೆ ಮತ್ತು ಪಾರದರ್ಶಕ ಸೇವೆ ಒದಗಿಸಲಿದೆ. ಪ್ರಸ್ತುತ ಮಾರುಕಟ್ಟೆ ದರದಲ್ಲಿ ಕಾಫಿಯನ್ನು ಖರೀದಿಸಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೋಮಾರ್ಕ್ ಸಂಸ್ಥೆ ಉಪಾಧ್ಯಕ್ಷ ಎಚ್.ಬಿ.ಬಾಲರಾಜು, ಮಾಜಿ ಅಧ್ಯಕ್ಷರಾದ ಡಿ.ಎಸ್.ರಘು, ಡಿ.ಬಿ.ಸುಬ್ಬೇಗೌಡ, ಬಿ.ಎಸ್.ಜಯರಾಮ್ ಕೆಜಿಎಫ್ ಅಧ್ಯಕ್ಷ ತೀರ್ಥಮಲ್ಲೇಶ್, ಉಪಾಧ್ಯಕ್ಷ ಮೋಹನ್​ಕುಮಾರ್, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕೋಮಾರ್ಕ್ ಸಂಸ್ಥೆ ನಿರ್ದೇಶಕರಾದ ಒ.ಎಸ್.ಗೋಪಾಲ ಗೌಡ, ಮನೋಹರ್ ಕತ್ಲೆಖಾನ್, ಬಸವರಾಜು, ಸಂಸ್ಥೆ ಮ್ಯಾನೇಜರ್ ಕೆ.ಕೆ.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net