

ಹನೂರು: ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಪಡಿಸಿಕೊಂಡು ವ್ಯಾಪಾರವನ್ನು ವೃದ್ಧಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸೋಮಶೇಖರ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸ್ವ ನಿಧಿ ಸೇ ಸಮೃದ್ಧಿ ಕಾರ್ಯಕ್ರಮದಡಿ ಆಯೋಜಿಸಿದ್ದ ಬೀದಿಬದಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು.
ಬೀದಿಬದಿ ವ್ಯಾಪಾರಿಗಳು ವ್ಯಾಪಾರವನ್ನು ವೃದ್ಧಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಿಸುವ ಉದ್ದೇಶದಿಂದ ಸರ್ಕಾರ ಬ್ಯಾಂಕ್ ಮೂಲಕ ಸಾಲವನ್ನು ನೀಡುತ್ತಿದೆ. ಆದರೆ ಕೆಲವರು ಮಾಹಿತಿ ಕೊರತೆಯಿಂದ ಸಾಲ ಪಡೆದುಕೊಂಡಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬೇಕು. ಹಾಗೆಯೇ ಪಡೆದ ಸಾಲವನ್ನು ಕಾಲಕಾಲಕ್ಕೆ ತಕ್ಕಂತೆ ಮರು ಪಾವತಿ ಮಾಡಬೇಕು. ಇದರಿಂದ ಹೆಚ್ಚಿನ ಸಾಲ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಹಾಗೂ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಲವನ್ನು ಪಡೆಯಲು ಇದೀಗ ಪೋಸ್ಟ್ ಆಫೀಸ್ ಮೂಲಕವೂ ಅವಕಾಶ ಕಲ್ಪಿಸಲಾಗಿದ್ದು, ಡಿಜಿಟಲ್ ಕಾರ್ಡ್ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಪಮ ಸದಸ್ಯರಾದ ಸುದೇಶ್, ಮಹೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆನಂದ್, ಸಮುದಾಯ ಸಂಘಟನಾಧಿಕಾರಿ ಪರಶೀವಮೂರ್ತಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಅನ್ಸರ್‌ಖಾನ್, ಅಂಚೆ ಇಲಾಖೆಯ ಮಧು, ಶಿವಕುಮಾರ್ ಹಾಗೂ ಇನ್ನಿತರರು ಇದ್ದರು.