

ಬೆಂಗಳೂರು: ನಗರವಾಸಿಗಳು ರಾಸಾಯನಿಕಮುಕ್ತ ತರಕಾರಿಗಳನ್ನು ತಮ್ಮ ಮನೆಯ ಆವರಣದಲ್ಲೇ ಬೆಳೆದು ತಾಜಾ ರೂಪದಲ್ಲಿ ಆಹಾರ ತಯಾರಿಕೆಗೆ ಬಳಸಿಕೊಳ್ಳಬಹುದು ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಸಲಹೆ ನೀಡಿದರು.
ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಸೋಮವಾರ ಆಯೋಜಿಸಿದ್ದ ನಗರ ತೋಟಗಾರಿಕೆ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದಲ್ಲಿ ನಗರ ತೋಟಗಾರಿಕೆ ಪರಿಕಲ್ಪನೆ ಮುನ್ನೆಲೆಗೆ ಬರಲಿದೆ. ಲಭ್ಯವಿರುವ ಕಡಿಮೆ ಜಾಗದಲ್ಲೇ ಕುಟುಂಬಕ್ಕೆ ಬೇಕಿರುವಷ್ಟು ತರಕಾರಿಗಳನ್ನು ಬೆಳೆಸಿ ಅವುಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಪರಿಸರದ ಭಾಗವಾಗಿಯೂ ಇಂತಹ ಕೆಲಸಕ್ಕೆ ಆದ್ಯತೆ ನೀಡುವುದು ಉತ್ತಮವಾದ ನಡೆಯಾದೀತು ಎಂದರು.
ಕೃಷಿ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಪ್ರಸಾದ್ ಮಾತನಾಡಿ, ನಗರವಾಸಿಗಳಿಗೆಂದೇ ವಿಶೇಷ ಕಾರ್ಯಾಗಾರವನ್ನು ರೂಪಿಸಿ ಅವರಲ್ಲಿ ಕೃಷಿ ಪೂರಕ ಚಟುವಟಿಕೆಯನ್ನು ಕೈಗೊಳ್ಳಲು ಪ್ರೇರೇಪಿಸುವ ಯತ್ನ ವಿವಿಯಿಂದ ಮಾಡಲಾಗುತ್ತಿದೆ. ಕಾರ್ಯಾಗಾರದ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಶಿಕ್ಷಾರ್ಥಿಗಳಿಗೆ ನಿರಂತ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ತಿಳಿಸಿದರು.
ವಿಜ್ಞಾನಿಗಳಿಂದ ತರಬೇತಿ:
ನಗರ ತೋಟಗಾರಿಕೆ ಕುರಿತು ಪ್ರತೀ ತಂಡದಲ್ಲಿ 30 ಮಂದಿಗೆ ಕಾರ್ಯಾಗಾರ ಏರ್ಪಡಿಸಲಾಗುತ್ತದೆ. ನಗರ ತೋಟಗಾರಿಕೆಯ ಪ್ರಾಮುಖ್ಯತೆ, ಸಾವಯವ ತ್ಯಾಜ್ಯಗಳ ಮರುಬಳಕೆ, ಕಾಂಪೊಸ್ಟ್ ತಯಾರಿಕೆ ಮತ್ತು ಪೋಷಕಾಂಶಗಳ ಮಹತ್ವ, ತಾರಸಿ ಕೈತೋಟ, ವರ್ಟಿಕಲ್ ಗಾರ್ಡನಿಂಗ್, ಮನೆಯ ಒಳಾಂಗಣದಲ್ಲಿ ಬೆಳೆಯುವ ಗಿಡಗಳ ನಿರ್ವಹಣೆ, ಹೈಡ್ರೋಪೋನಿಕ್ಸ್ ಇತ್ಯಾದಿ ವಿಷಯಗಳ ಕುರಿತು ತಜ್ಞರು, ವಿಜ್ಞಾನಿಗಳಿಂದ ತರಬೇತಿ ನೀಡಲಾಗುತ್ತದೆ.
ಇದೇ ವೇಳೆ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವ ‘ಬೀಜ ಉಗ್ರಾಣ’ ಹಾಗೂ ರೇಷ್ಮೆಗೂಡಿನಿಂದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಯನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಕೆ.ಪಿ.ರಘುಪ್ರಸಾದ್, ರೇಷ್ಮೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಗೌಡ, ತೋಟಗಾರಿಕೆ ತಜ್ಞೆ ಡಾ. ಎಂ.ಶಾಲಿನಿ, ಬೆಂಗಳೂರು ಗಾರ್ಡನ್ ಸಿಟಿ ಫಾರ್ಮರ್ಸ್ ಸಂಸ್ಥೆಯ ಟ್ರಸ್ಟಿ ಡಾ. ರಾಜೇಂದ್ರನಾರಾಯಣ ಹೆಗಡೆ, ಗೋ ಗ್ರೀನ್ ಆರ್ಗಾನಿಕ್ಸ್‌ನ ಪದಾಧಿಕಾರಿ ಜಾಸ್ಮಿನ್ ಫರ್ನಾಂಡೀಸ್ ಮತ್ತಿತರರಿದ್ದರು.