

ಸಕಲೇಪುರ: ವೈಜ್ಞಾನಿಕ ಪದ್ಧ್ದತಿಯನ್ನು ಅಳವಡಿಸಿಕೊಂಡು ಕಾಳುಮೆಣಸನ್ನು ರೈತರು ಬೆಳೆಯಲು ಮುಂದಾಗಬೇಕೆಂದು ಭಾರತೀಯ ಏಲಕ್ಕಿ ಸಂಶೋಧನೆ ಸಂಸ್ಥೆಯ ದೋಣಿಗಲ್ ಮುಖ್ಯಸ್ಥ ಡಾ.ಹರ್ಷ ಕೆ.ಎನ್.ಹೇಳಿದರು.
ತಾಲೂಕಿನ ದೋಣಿಗಲ್ ಗ್ರಾಮದಲ್ಲಿ ಭಾರತೀಯ ಏಲಕ್ಕಿ ಸಂಶೋಧನೆ ಸಂಸ್ಥೆ ಹಾಗೂ ಭಾರತೀಯ ಸಾಂಬಾರ ಮಂಡಳಿ ಸಕಲೇಶಪುರ ವತಿಯಿಂದ ಕಾಳು ಮೆಣಸು ಬೆಳೆಯ ಮಾಸ್ಟರ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಳುಮೆಣಸಿನ ಚಿಕ್ಕ ಬಳ್ಳಿಗಳಿಗೆ ಹಳದಿ ರೋಗ ಬಾರದಂತೆ ಶೇ.3ರಷ್ಟು ಸುಣ್ಣ ದ್ರಾವಣ ಸಿಂಪಡಿಸಬೇಕು. ಅಧಿಕ ಇಳುವರಿ ನೀಡುವ ಬಳ್ಳಿಗಳು ನೀರಿನ ಅಭಾವದಿಂದ ಸೊರಗುವುದನ್ನು ತಡೆಯಲು ರಕ್ಷಣಾತ್ಮಕ ನೀರಾವರಿ ಸೌಲಭ್ಯ ಒದಗಿಸಬೇಕು. ಅಧಿಕ ಆದಾಯ ತರುವುದಕ್ಕೆ ನಾವು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಕಲೇಶಪುರ ಸಾಂಬಾರ ಮಂಡಳಿ ಉಪನಿರ್ದೇಶಕ ಎಂ.ವೈ.ಹೊನ್ನೂರ್, ಹಿರಿಯ ಕ್ಷೇತ್ರಾಧಿಕಾರಿ ಎಸ್.ಕುಮಾರ್, ಕಾಫಿ ಮಂಡಳಿಯ ಉಪನಿರ್ದೇಶಕ ಆರ್.ಶಕ್ತಿ, ಮಡಿಕೇರಿ ಸಾಂಬಾರ ಮಂಡಳಿ ಸಹಾಯಕ ನಿರ್ದೇಶಕಿ ರಶ್ಮಿ ಇದ್ದರು.