

ಹುಬ್ಬಳ್ಳಿ : ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕಾಗಿ ವನಸ್ಪತಿಗಳನ್ನು ಬೆಳಸಬೇಕು ಎಂದು ದೋಣಿ-ಗದಗ ಕಪ್ಪತಗುಡ್ಡದ ಶ್ರೀ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ ಮತ್ತು ಸಾಂಸ್ಕೃತಿಕ ಸಮುದಾಯ ಸಂಘ ಮತ್ತು ಕಟ್ಟಿ ಮಂಗಳಮ್ಮ ಮಹಿಳಾ ಮಂಡಳದ ಸಹಯೋಗದಲ್ಲಿ ಆಯೋಜಿಸಿದ್ದ ಔಷಧೀಯ ಸಸ್ಯಗಳ ಪ್ರದರ್ಶನ ಉದ್ಘಾಟಿಸಿ, ಅವರು ಆಶೀರ್ವಚನ ನೀಡಿದರು.
ದೇಶದಲ್ಲಿ ಹಸಿರು ಸಂಪತ್ತಿನ ರಕ್ಷಣೆ ಆಗಬೇಕು. ದೇಶದ ಸಸ್ಯಶಾಸ್ತ್ರ ಪರಂಪರೆಗೆ ಭವ್ಯವಾದ ಇತಿಹಾಸವಿದೆ. ಕಪ್ಪತ್ತ ಗುಡ್ಡದ ಕುರಿತು ಸಂಭೋದನೆ, ಸಂರಕ್ಷಣೆ, ಸಂವರ್ಧನೆ ಮತ್ತು ಸಂಶೋಧನೆಗಳು ಜರುಗಬೇಕು. ಕಾಡು ಹೆತ್ತ ತಾಯಿ ಇದ್ದಂತೆ. ಪ್ರತಿಯೊಬ್ಬರು ಗಿಡ-ಮರಗಳನ್ನು ಪ್ರೀತಿಸಿ, ಬೆಳೆಸಬೇಕು. ಗುಣಾತ್ಮಕ ಬದಲಾವಣೆಗೆ ನಿಷ್ಠುರತೆ ಇರಬೇಕು. ಕಪ್ಪತ್ತ ಗುಡ್ಡದ ಬೆಳವಣಿಗೆಗೆ ಎಲ್ಲ ಕನ್ನಡಿಗರು ಕೈಜೋಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಂಸ್ಕೃತಿಕ ಸಮುದಾಯ ಸಂಘದ ಅಧ್ಯಕ್ಷ ಡಾ. ಜಿ.ಬಿ. ಕಲಕೋಟಿ ಮಾತನಾಡಿ, ಔಷಧಿ ಸಸ್ಯಗಳ ಉಪಯೋಗದಿಂದ ಆರೋಗ್ಯ ವೃದ್ಧಿಸುತ್ತದೆ ಎಂದರು.
ಸಸ್ಯಶಾಸ್ತ್ರ ಪರಿಣಿತರಾದ ಡಾ. ಬಿ.ಡಿ ಹುದ್ದಾರ, ಪ್ರಕಾಶ ಸಿದ್ದನಗೌಡರ, ಪ್ರೊ. ರವೀಂದ್ರ ಕರಡಿ ಅವರು 106 ಔಷಧಿ ಸಸ್ಯಗಳ ಪ್ರದರ್ಶನ ಮಾಡಿ, ಅವುಗಳ ಉಪಯುಕ್ತತೆಗಳನ್ನು ಸಾರ್ವಜನಿಕರಿಗೆ ತಿಳಿಸಿದರು.
ಪ್ರೋಬಸ್ ಕ್ಲಬ್ ಅಧ್ಯಕ್ಷ ಬಸವರಾಜ ಕೋಟಿ, ಶ್ರೀ ಕಟ್ಟಿ ಮಂಗಳಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ರೇಶ್ಮಾ ವೈಚಾಳ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತವಿಕ ಮಾತನಾಡಿದರು. ಡಾ. ಬಿ.ಎಸ್. ಮಾಳವಾಡ ನಿರೂಪಿಸಿದರು. ಡಾ. ಎಂ.ಜಿ. ಸಜ್ಜನರ ವಂದಿಸಿದರು.