

ಶಿರಸಿ: ಸ್ಥಳೀಯ ಮಣ್ಣು ಹಾಗೂ ಹವಾಮಾನಕ್ಕೆ ಹೊಂದಿಕೆಯಾಗುವ ಬೆಳೆ ಬೆಳೆಯುವತ್ತ ರೈತರು ಚಿಂತನೆ ನಡೆಸಬೇಕು. ನಮ್ಮ ಮಣ್ಣಿಗೆ ಹೊಂದಿಕೆ ಆಗದ ಬೆಳೆ ಬೆಳೆದರೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮದೊಂದಿಗೆ ಹೊಸ ರೋಗಗಳೂ ಹುಟ್ಟಿಕೊಳ್ಳುವ ಆತಂಕ ಎದುರಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಅರಣ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ನೀಡುವ ಸಬ್ಸಿಡಿ ದರದ ಟಿಲ್ಲರ್ ಹಾಗೂ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿ ಬಳಿಕ ನಡೆದ ಕಿಸಾನ್ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಶೇ. 18ರಷ್ಟು ಮಾತ್ರ ಕೃಷಿ ಭೂಮಿ ಇದ್ದು, ಅಡಕೆ, ಕಾಳು ಮೆಣಸನ್ನೇ ನಂಬಿಕೊಂಡಿರುವ ರೈತರಿಗೆ ಅಡಕೆ ಕ್ಷೇತ್ರ ವಿಸ್ತರಣೆಯಿಂದ ಸಮಸ್ಯೆ ಆಗುತ್ತಿದೆ. ಈಗ ಹೊಸದಾಗಿ ರಿಂಗ್ ಸ್ಪಾಟ್ ವೈರಸ್ನಂತಹ ರೋಗಗಳೂ ಕಾಡುತ್ತಿದ್ದು, ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ಪ್ರಾದೇಶಿಕ ಬೆಳೆ ರಕ್ಷಣೆಗಾಗಿ ವಿಶೇಷ ಸೂತ್ರವೊಂದನ್ನು ಅಳವಡಿಸಬೇಕಾದ ಅಗತ್ಯತೆ ಇದೆ ಎಂದರು.
ನಮ್ಮ ಭಾಗದ ಯುವಕರು, ಜನರು ಎಲ್ಲೇ ಹೋಗಿ, ನೌಕರಿ ಮಾಡಿದರೂ ಪಾರಂಪರಿಕ ಕೃಷಿಯನ್ನು ಎಂದಿಗೂ ಮರೆಯಬಾರದು. ಕೃಷಿ ಹಾಗೂ ಅರಣ್ಯ ಒಂದಕ್ಕೊಂದು ಪೂರಕ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರಮಾಣ ಜಾಸ್ತಿ ಆಗುತ್ತಿದೆ. ಅರಣ್ಯ ಪ್ರಗತಿ ಆಗಿದ್ದರೆ ಅದು ಕೇವಲ ಇಲಾಖೆಯ ಶ್ರಮವಲ್ಲ. ರೈತರ ಸಹಕಾರದಿಂದ ಅರಣ್ಯ ಪ್ರಗತಿ ಆಗಿದೆ. ಕೃಷಿ ಅವಲಂಬಿತ ರಾಷ್ಟ ನಮ್ಮದು. ರೈತ ದುಡಿಯದಿದ್ದರೆ ಸಾರ್ವಜನಿಕರು ಕಷ್ಟ ಎದುರಿಸುತ್ತಾರೆ. ರೈತರಿಗೆ ಅಗತ್ಯ ಸೌಲಭ್ಯವನ್ನು ನಾವು ಒದಗಿಸಿದರಷ್ಟೇ ಕೃಷಿ ಕ್ಷೇತ್ರ ಪ್ರಬಲವಾಗುತ್ತದೆ. ದೇಶ ಸ್ವತಂತ್ರವಾದ ಬಳಿಕ ಕೃಷಿ ಕ್ಷೇತ್ರದಲ್ಲಿ ದೇಶ ಅಗಾಧ ಸಾಧನೆ ಮಾಡಿದೆ. ಇಂದು ವಿದೇಶಕ್ಕೂ ಆಹಾರ ರಫ್ತು ಮಾಡುವ ಸ್ಥಾನಕ್ಕೆ ನಾವು ಬೆಳೆದಿದ್ದೇವೆ ಎಂದರು.
ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವಾ ಮಾತನಾಡಿ, ‘ರೈತನಲ್ಲಿ ದೇಶದ ಸಂಪತ್ತು ಅಧಿಕ ಪ್ರಮಾಣದಲ್ಲಿದ್ದರೆ ದೇಶ ಆಹಾರ, ಸಾಂಸ್ಕೃತಿಕವಾಗಿ ಪ್ರಬಲವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ರೈತರ ಸರಾಸರಿ ವಯಸ್ಸು 61ರಷ್ಟಿದ್ದು, ಯುವಜನತೆ ಮಹಾನಗರಗಳಲ್ಲಿಯೇ ಇದ್ದಾರೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕ್ಷೇತ್ರಕ್ಕೆ ಬರಬೇಕು’ ಎಂದರು.
ಇದೇ ವೇಳೆ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಬಗರ್ ಹುಕುಂ ಸಮಿತಿ ಸದಸ್ಯ ಎಸ್.ಕೆ. ಭಾಗ್ವತ್, ಕೀಟ ತಜ್ಞೆ ಡಾ. ರೂಪಾ ಪಾಟೀಲ, ಕೃಷಿ ಜಂಟಿ ನಿರ್ದೇಶಕ ಡಾ. ಶಿವಪ್ರಸಾದ ಗಾಂವಕರ್, ನಟರಾಜ, ಮಧುಕರ ನಾಯ್ಕ, ಇತರರಿದ್ದರು.