ಮಾಜಿ ಸಿಎಂ ಎಚ್​ಡಿಕೆ ಬಳಿಗೆ ಆಯುಷ್​-ದಂತ ವೈದ್ಯರ ದಂಡು; ಕಾರಣವಿದು..

Ayush Dental
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬಳಿಗೆ ಆಯುಷ್ ಹಾಗೂ ದಂತ ವೈದ್ಯರೇ ದಂಡೇ ತೆರಳಿದೆ. ಸಂಕಷ್ಟದ ಸಮಯದಲ್ಲಿ ನೆರವಾಗಿದ್ದ ನಮಗೇ ಈಗ ಸಂಕಟ ಎದುರಾಗಿದೆ ಎಂಬುದಾಗಿ ಈ ವೈದ್ಯರು ಮಾಜಿ ಸಿಎಂ ಬಳಿ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ.

ಕೋವಿಡ್​-19 ಸಮಯದಲ್ಲಿ ನಮ್ಮನ್ನು ಬಳಸಿಕೊಂಡು ಈಗ ಸೇವೆಯಿಂದ ಮುಕ್ತಗೊಳಿಸುತ್ತಿದ್ದಾರೆ ಎಂಬ ನೋವನ್ನು ಈ ವೈದ್ಯರು ತೋಡಿಕೊಂಡಿದ್ದಾರೆ. ಅದಕ್ಕೆ ಸ್ಪಂದಿಸಿರುವ ಮಾಜಿ ಸಿಎಂ, ಆಗತ್ಯ ಇದ್ದಾಗ ಕೆಲಸ ಮಾಡಿಸಿಕೊಂಡು, ಅಗತ್ಯ ಇಲ್ಲದಿದ್ದಾಗ ಮನೆಗೆ ಹೋಗಿ ಎನ್ನುವುದು ಯಾವ ನ್ಯಾಯ? ಎಂದು ಸರ್ಕಾರಕ್ಕೆ ಪ್ರಶ್ನೆ ಎಸೆದಿದ್ದಾರೆ.

ಕೋವಿಡ್ 1, 2 ಮತ್ತು 3ನೇ ಅಲೆಯ ತುರ್ತು ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯುಷ್, ದಂತ ವೈದ್ಯರನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿತ್ತು. ಎರಡು ವರ್ಷ ರಾಜ್ಯಕ್ಕೆ ಕಷ್ಟವಿದ್ದಾಗ ಇವರ ಸೇವೆ ಪಡೆದು, ಈಗ ಎಕಾಏಕಿ ಬೇಡ ಎನ್ನುವುದು ಸರಿಯಲ್ಲ. ಆದಷ್ಟೂ ಇವರ ಸೇವೆಯನ್ನು ಮುಂದುವರಿಸಬೇಕು ಹಾಗೂ ಬಿಬಿಎಂಪಿ ವತಿಯಿಂದ ಬೆಂಗಳೂರಿನ ಎಲ್ಲ ವಾರ್ಡುಗಳಲ್ಲಿ ತೆರೆಯಲಿರುವ 'ನಮ್ಮ ಕ್ಲಿನಿಕ್​'ಗಳಿಗೆ ಇವರನ್ನು ನಿಯೋಜಿಸಿದರೆ ಉತ್ಸಾಹಿಗಳಾದ ಇವರಿಂದ ಉತಮ್ಮ ಆರೋಗ್ಯ ಸೇವೆ ಲಭಿಸಲಿದೆ. ಅಲ್ಲದೆ 2 ವರ್ಷಗಳ ತುರ್ತು ಸಂದರ್ಭದಲ್ಲಿ ಕೆಲಸ ಮಾಡಿದ ಅನುಭವ ಕೂಡ ಇವರಿಗಿದ್ದು, ಇವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net