ದಾಂಪತ್ಯ ಜೀವನಕ್ಕೆ ಕಾಲಿಟ್ಟ 22 ಜೋಡಿ

ಮಅರರಿಅಗೆ
Published on

ಬೀದರ್: ಶ್ರೀ ಸಿದ್ದೇಶ್ವರ ಟ್ರಸ್ಟ್ ಅಡಿ ಅಪ್ನಾ ಘರ್ ಸಂಸ್ಥೆಯಿಂದ ನಗರದಲ್ಲಿ ಇತ್ತೀಚೆಗೆ ಉಚಿತ ಸಾಮೂಹಿಕ ವಿವಾಹ ಜರುಗಿತು. ಕಾರ್ಯಕ್ರಮದಲ್ಲಿ 22 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ ಹಾಗೂ ವರನಿಗೆ ಪಂಚೆ, ಶಟ್೯, ಪೇಟಾ, ಟಾವೆಲ್, ಹೂವಿನ ಹಾರ ಮತ್ತು ಭಾಸಿಂಗ್ ಉಚಿತವಾಗಿ ಕೊಡಲಾಯಿತು. ಅಲ್ಲದೆ ಕುಕ್ಕರ್, ಫ್ಯಾನ್ ಸಹ ನೀಡಲಾಗಿದೆ.

ಲಿಂಗಾಯತ ಮಹಾಮಠದ ಪೂಜ್ಯ ಅಕ್ಕ ಅನ್ನಪೂರ್ಣ, ಭಾಲ್ಕಿ ಹಿರೇಮಠ ಸಂಸ್ಥಾನ ಶ್ರೀ ಗುರುಬಸವ ಪಟ್ಟದ್ದೇವರು, ಡಾ.ಗಂಗಾಂಬಿಕೆ ಅಕ್ಕ, ಶ್ರೀ ಪ್ರಭು ದೇವರು ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ ಮಾತನಾಡಿ, ಅಪ್ನಾ ಘರ್ ಸಂಸ್ಥೆಯಡಿ ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ. ಕರೊನಾದಿಂದ ಜನರು ಸಂಕಷ್ಟದಲ್ಲಿದ್ದಾರೆ. ಸಾಲ ಮಾಡಿ ತಮ್ಮ ಮಕ್ಕಳ ಮದುವೆ ಮಾಡುವ ಸ್ಥಿತಿಯಲ್ಲಿ ಬಡ ಜನರಿಲ್ಲ. ಹೀಗಾಗಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದರು.

ನೀಲಾಕ್ಷಿ ಶಶಿಕಾಂತ ಮೋದಿ, ಡಾ.ವಿಜಯಶ್ರೀ ಬಶೆಟ್ಟಿ, ಡಾ.ಸುಭಾಷ ಬಶೆಟ್ಟಿ, ಮೀನಾಕ್ಷಿತಾಯಿ, ಸುಗಲಾದೇವಿ, ಮಹಾರುದ್ರ ಡಾಕುಳಗೆ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಶಿವಾನಂದ ಗುಂದಗಿ, ಶಾಂತಾ ಗುಂದಗಿ, ಶಿವಕುಮಾರ ಮಾಶೆಟ್ಟಿ ಇತರರಿದ್ದರು.

ಸಾಲ ಮಾಡಿಯಾದರೂ ಅದ್ದೂರಿ ಮದುವೆ ಮಾಡಬೇಕು ಎಂಬ ಮನೋಭಾವ ತೊಲಗಿದಾಗ ಮಾತ್ರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು. ಮದುವೆ ಸೇರಿ ಇತರ ಶುಭ ಸಮಾರಂಭಗಳನ್ನು ಸರಳವಾಗಿ ಆಯೋಜಿಸಲು ಆದ್ಯತೆ ಕೊಡಬೇಕು.| ಪೂಜ್ಯ ಅಕ್ಕ ಅನ್ನಪೂರ್ಣ, ಲಿಂಗಾಯತ ಮಹಾಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net