ಗುಂಪುಮನೆ ಪ್ರಸ್ತಾವನೆಗೆ ಅನುಮೋದನೆ

26 KRN-4
ಪಟ್ಟಣದ ಪುರಸಭೆಯ ಆವರಣದಲ್ಲಿ ಕಸ ಸಂಗ್ರಹ ತಳ್ಳುವ ಗಾಡಿಗಳು ಹಾಗೂ ನೀರು ಸರಬರಾಜಿನ ಟ್ಯಾಂಕರ್‌ನ್ನು ಚಲಾಯಿಸುವ ಮೂಲಕ ಶಾಸಕ ಡಿ.ರವಿಶಂಕರ್ ಅವುಗಳ ಸೇವೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷೆ ವಸಂತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್‌ಶಂಕರ್, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ಮತ್ತು ಸದಸ್ಯರು ಇದ್ದರು.
Published on

ಕೆ.ಆರ್.ನಗರ: ಪಟ್ಟಣದ ಪುರಸಭೆಯ ಆವರಣದಲ್ಲಿ ಮಂಗಳವಾರ ನೂತನವಾಗಿ ಖರೀದಿಸಲಾಗಿರುವ ಕಸ ಸಂಗ್ರಹ ತಳ್ಳುವ ಗಾಡಿಗಳು ಹಾಗೂ ನೀರು ಸರಬರಾಜಿನ ಟ್ಯಾಂಕರ್ ಸೇವೆಗೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು.

ಪಟ್ಟಣದ ನಾಲ್ಕು ದಿಕ್ಕಿನಲ್ಲಿ ಜಿ+2 ಇಂದ ಜಿ+3ಗೆ ಗುಂಪು ಮನೆಗಳನ್ನು ಉನ್ನತೀಕರಿಸುವ ಪ್ರಸ್ತಾವನೆಗೆ ವಸತಿ ಸಚಿವ ಜಮೀರ್ ಅಹಮ್ಮದ್ ಅವರಿಂದ ಅನುಮೋದನೆ ಪಡೆಯಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಕೃತಕ ಅಂಗಾಂಗ ಜೋಡಣೆಗೆ 3 ಲಕ್ಷ ರೂ. ಅನುದಾನ ಕಾಯ್ದಿರಿಸುವಂತೆ ಕೋರಿದ್ದೇನೆ ಎಂದು ತಿಳಿಸಿದರು.

ಪಟ್ಟಣದಾದ್ಯಂತ ಅಮೃತ್ 2.0 ಯೋಜನೆಯಡಿ 20 ಕೋಟಿ ರೂ. ಅನುದಾನದಲ್ಲಿ ಯುಜಿಡಿ ಕಾಮಗಾರಿಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. 30 ಕೋಟಿ ರೂ. ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಕಾಮಗಾರಿಗಳನ್ನು ಓವರ್ ಹೆಡ್ ಟ್ಯಾಂಕ್ ಸಹಿತ ಕೈಗೊಳ್ಳಲು ಅನುದಾನ ಬಿಡುಗಡೆಯಾಗಿದೆ. ಇದರೊಂದಿಗೆ ಪಾರ್ಕ್‌ಗಳ ಅಭಿವೃದ್ಧಿ ಮತ್ತು ಬಯಲು ರಂಗಮಂದಿರದ ಆಧುನೀಕರಣಕ್ಕೆ 5 ಕೋಟಿ ರೂ. ಮೀಸಲಿರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಪಟ್ಟಣದ ಗರುಡಗಂಬ ವೃತ್ತ ಮತ್ತು ಪುರಸಭೆ ವೃತ್ತಗಳಲ್ಲಿ ಕಾವೇರಿ ಮಾತೆ, ಕೃಷ್ಣರಾಜೇಂದ್ರ ಒಡೆಯರ್ ಪ್ರತಿಮೆಗಳು ಮತ್ತು ಕಾರಂಜಿ ಸಹಿತ ಸೌಂದರೀಕರಣ ಮಾಡಲಿದ್ದು, ಈಗಾಗಲೇ ಎನ್‌ಜಿಒಗಳೊಂದಿಗೆ ಚರ್ಚಿಸಲಾಗಿದೆ. ಇದರೊಂದಿಗೆ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಕ್ರೈಂ ನಿಯಂತ್ರಣಕ್ಕಾಗಿ ಪ್ರತ್ಯೇಕ ಪಟ್ಟಣ ಪೊಲೀಸ್ ಠಾಣೆ ತೆರೆಯಲು ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ವ್ಯಾಪ್ತಿಯ ವಿದ್ಯಾವಂತ ನಿರುದ್ಯೋಗಿ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಪಟ್ಟಣ ವ್ಯಾಪ್ತಿಯಲ್ಲಿ ಆಧುನಿಕ ಸುಸಜ್ಜಿತ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಸೌಲಭ್ಯವುಳ್ಳ ಗ್ರಂಥಾಲಯದ ಅಭಿವೃದ್ಧಿಗಾಗಿ ಪುರಸಭೆಯಲ್ಲಿ ವಸೂಲಾಗಿರುವ 10 ಲಕ್ಷ ರೂ. ಸೆಸ್ ಅನ್ನು ಮೀಸಲಿರಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಶಿವುನಾಯಕ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಉಪಾಧ್ಯಕ್ಷೆ ವಸಂತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್‌ಶಂಕರ್, ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ, ಸೈಯದ್‌ಸಿದ್ದಿಕ್, ಕೆ.ಎಲ್.ಜಗದೀಶ್, ಜಾವಿದ್‌ಪಾಷಾ, ನಟರಾಜು, ಶಂಕರ್‌ಸ್ವಾಮಿ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ಗೀತಾಮಹೇಶ್, ಪುಟ್ಟರಾಜು, ಆದರ್ಶ, ಧರ್ಮರಾಜು ಮತ್ತು ಪೌರಕಾರ್ಮಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net