

ಚಿಕ್ಕಬಳ್ಳಾಪುರ: ಕುಟುಂಬಸ್ಥರಿಗೆ ನಡತೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ವಿಚಾರದಲ್ಲಿ ಕುಪಿತರಾದ ಮೂವರು ಗೆಳೆಯನ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.
ಅಸ್ಸಾಂ ಮೂಲದ ಮೋಹನ್ ( 27). ಅಸ್ಸಾಂ ಮೂಲದ ದಿನೇಶ್, ಹರಿಧನ್, ಧನಚಂದ್ ಆರೋಪಿಗಳು. ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಸಮೀಪದ ಹ್ಯಾಪಿ ಟ್ರೀಟ್ ರೆಸಾರ್ಟ್ ನಲ್ಲಿ ಕಳೆದ ಎರಡು ತಿಂಗಳಿಂದ ಅಸ್ಸಾಂ ಮೂಲದ ಮೋಹನ್, ದಿನೇಶ್, ಧನಚಂದ್, ಹರಿದನ್ ಕೆಲಸಕ್ಕೆ ಸೇರಿಕೊಂಡಿದ್ದರು. ಭಾನುವಾರ ರಾತ್ರಿ ಊಟ, ಮದ್ಯ ಸೇವಿಸಿದ್ದಾರೆ. ಇದೇ ವೇಳೆ ಕುಡಿತದ ನಶೆಯಲ್ಲಿ ಮೋಹನ್ ಮೇಲೆ ಮೂವರು ಗಲಾಟೆ ಮಾಡಿದ್ದಾರೆ. ಇದು ವಿಕೋಪಕ್ಕೆ ಹೋಗುತ್ತಿದ್ದಂತೆ ಆಕ್ರೋಶಗೊಂಡ ಅರೋಪಿಗಳು ದೊಡ್ಡ ಕಟ್ಟಿಗೆಯಿಂದ ಮರ್ಮಾಂಗ, ತಲೆ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮೋಹನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
*ಚಾಡಿ ಮಾತು ತಂದು ಕುತ್ತು
ಅಸ್ಸಾಂನಿಂದ ಬಂದಿದ್ದ ನಾಲ್ವರು ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಮೋಹನ್ ಗೆಳೆಯರ ಕುಟುಂಬಸ್ಥರಿಗೆ ಮೊಬೈಲ್ ಮೂಲಕ ಚಾಡಿ ಹೇಳುತ್ತಿದ್ದ. ಇಲ್ಲಿ ಚೆನ್ನಾಗಿ ಕುಡಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಬಂದು ಇಲ್ಲಿ ನೋಡಿ, ನಿಮಗೆ ಗೊತ್ತಾಗುತ್ತದೆ ಎಂದೇಳಿದ್ದ. ಭಾನುವಾರ ರಾತ್ರಿ ಮೊಬೈಲ್ ಕಸಿದುಕೊಂಡು ಏನೇನೋ ಹೇಳಿದ್ದು ಇದರಿಂದ ಕುಪಿತಗೊಂಡ ಹರಿಧನ್, ದಿನೇಶ್, ಧನಚಂದ್ ಕೈಗೆ ಸಿಕ್ಕಿದ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.