

ಮಂಜುನಾಥ ಎಸ್. ಅಂಗಡಿ ಧಾರವಾಡ
ಕಳೆದ ವರ್ಷ ಮಳೆಯ ವಿರಳತೆಯಿಂದ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಹದಭರಿತ ಮಳೆಗೆ ಕೆರೆ- ಕಟ್ಟೆಗಳು ಭರ್ತಿಯಾಗುತ್ತಿದ್ದು, ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿದೆ.
2023ರ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟು ರೈತರು ಕಂಗೆಟ್ಟಿದ್ದರು. ಮಳೆಯ ಅಭಾವದಿಂದ ಬೆಳೆ ಉಳಿಸಿಕೊಳ್ಳಲು ರೈತರು ಹೆಚ್ಚೆಚ್ಚು ಬೋರ್ವೆಲ್ಗಳನ್ನು ಕೊರೆಸಿದ್ದರು. ಮಳೆ ಕೊರತೆ ಹಾಗೂ ಬೋರ್ವೆಲ್ಗಳ ಅತಿಯಾದ ಬಳಕೆಯಿಂದ ಅಂತರ್ಜಲ ಮಟ್ಟ ಕುಸಿದಿತ್ತು. 2023ರ ಫೆಬ್ರವರಿಯಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 10.04 ಮೀಟರ್ಗೆ ಇಳಿಕೆಯಾಗಿತ್ತು. ಈ ಬಾರಿ ಬಹುತೇಕ ಹದಭರಿತ ಮಳೆಯಾಗಿದೆ. ಬಿಟ್ಟೂ ಬಿಡದೆ ಸತತ ಸುರಿದ ಮಳೆಯಿಂದ ಭೂಮಿ ತೇವಾಂಶ ಹಿಡಿದಿಟ್ಟುಕೊಂಡಿದೆ. ಈ ವರ್ಷದ ಜುಲೈ ಅಂತ್ಯಕ್ಕೆ ಸರಾಸರಿ ಅಂತರ್ಜಲ ಮಟ್ಟ 7.72 ಮೀಟರ್ಗೆ ಏರಿಕೆಯಾಗಿದ್ದು, ಜಿಲ್ಲೆ ಸುರಕ್ಷಿತ ವಲಯದಲ್ಲಿದೆ.
2021ರ ಜುಲೈನಲ್ಲಿ ಜಿಲ್ಲೆಯ ಅಂತರ್ಜಲ ಮಟ್ಟ 7.57 ಮೀಟರ್ ಇತ್ತು. 2022ರ ಜುಲೈನಲ್ಲಿ 6.03 ಮೀ., 2023ರ ಜುಲೈನಲ್ಲಿ 8.23 ಮೀ. ಹಾಗೂ 2024ರ ಜುಲೈ ಅಂತ್ಯಕ್ಕೆ 7.92 ಮೀ. ಇದೆ. ಅಳ್ನಾವರ ತಾಲೂಕಿನಲ್ಲಿ ಉತ್ತಮ ಮಳೆಯಾದ ಪರಿಣಾಮ ಸರಾಸರಿ ಅಂತರ್ಜಲ ಮಟ್ಟ 1.29 ಮೀ. ಇದೆ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಅತಿ ಹೆಚ್ಚು ಅಂದರೆ 11.35 ಮೀ. ಇದೆ.
ಅಂತರ್ಜಲ ನಿರ್ದೇಶನಾಲಯವು ಜಿಲ್ಲೆಯಲ್ಲಿ 36 ಅಧ್ಯಯನ ಕೊಳವೆ ಬಾವಿ ಹಾಗೂ 3 ಅಧ್ಯಯನ ತೆರೆದ ಬಾವಿಗಳನ್ನು ಹೊಂದಿದೆ. ಅವುಗಳ ಮೂಲಕ ಪ್ರತಿ ತಿಂಗಳು ಅಂತರ್ಜಲ ಮಟ್ಟವನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಅಲ್ಲಿ ದಾಖಲಾಗುವ ಮಟ್ಟದ ಅನುಗುಣವಾಗಿ ಇಲಾಖೆ ಅನುಷ್ಠಾನ ಇಲಾಖೆಗೆ ಪರಿಹಾರೋಪಾಯ ಕಾರ್ಯಗಳನ್ನು ಸೂಚಿಸುತ್ತದೆ. ರಾಜ್ಯದ ಅಂತರ್ಜಲ ಮಟ್ಟ ಕುಸಿತವನ್ನು ಅಂತರ್ಜಲ ನಿರ್ದೇಶನಾಲಯ 4 ಪ್ರಕಾರಗಳಲ್ಲಿ ವಿಂಗಡಿಸಿದೆ. ಸುರಕ್ಷಿತ, ಅರೆ ವಿಷಮ, ವಿಷಮ ಹಾಗೂ ನೀರಿನ ಅತಿಯಾದ ಬಳಕೆಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಸದ್ಯದ ಅಂಕಿ- ಅಂಶದ ಪ್ರಕಾರ ಧಾರವಾಡ ಸುರಕ್ಷಿತ ಪ್ರದೇಶದಲ್ಲಿದೆ.
ಪ್ರಸಕ್ತ ಮುಂಗಾರಿನ ಜೂನ್ನಿಂದ ಈವರೆಗೆ ಉತ್ತಮ ಮಳೆಯಾಗಿದೆ. ಆಗಸ್ಟ್ ಕೊನೆಯ ವಾರ ಹಾಗೂ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಅಡ್ಡ ಮಳೆಯಾಗುವ ನಿರೀಕ್ಷೆ ಇದೆ. ಇದರಿಂದ ಜಿಲ್ಲೆಯ ಅಂತರ್ಜಲ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ‘ಮಳೆಯಾದರೆ ಕೇಡಲ್ಲ; ಮನೆ ಮಗ ಉಂಡರೆ ಕೇಡಲ್ಲ’ ಎಂಬ ನಾಣ್ಣುಡಿಯಂತೆ ಮಳೆಯಾದಷ್ಟು ಉತ್ತಮ. ಇದರಿಂದ ಹಿಂಗಾರು ಹಂಗಾಮಿಗೆ ಪೂರಕ ಎಂಬುದು ರೈತರ ಅಭಿಪ್ರಾಯ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಪ್ರಶಸ್ತವಾಗಿದೆ. ಫೆಬ್ರವರಿಯಲ್ಲಿ 10.04 ಮೀಟರ್ಗೆ ಇಳಿಕೆಯಾಗಿದ್ದ ಅಂತರ್ಜಲ ಮಟ್ಟ, ಜುಲೈ ಅಂತ್ಯಕ್ಕೆ 7.72 ಮೀಟರ್ಗೆ ಏರಿಕೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳೂ ಸುರಕ್ಷಿತ ವಲಯದಲ್ಲಿದೆ. ಡಾ. ಎಂ.ಬಿ. ಬಳಿಗಾರ, ಹಿರಿಯ ಭೂವಿಜ್ಞಾನಿ, ಧಾರವಾಡ