

ಮಧುಗಿರಿ: ಸರ್ಕಾರ ಮಾಡದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದು ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.
ತಾಲೂಕಿನ ಪುರವಾರ ಹೋಬಳಿ ತಾಳಕೆರೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆಯ ಅಡಿಯಲ್ಲಿ 840ನೇ ಕೆರೆ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆರೆಗಳ ಅಭಿವೃದ್ಧಿಯಿಂದ ರೈತರಿಗೆ ಅಂತರ್ಜಲ ವೃದ್ಧಿಯಾಗಿ ಕೃಷಿಗೆ ಅನುಕೂಲವಾಗುತ್ತದೆ.ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳ ಅಗ್ನಿಪರೀಕ್ಷೆ ಎದುರಿಸುತ್ತಿದೆ. ಕೆಲ ಕಪಟಿಗಳುಊಹಾಪೋಹ ಹುಟ್ಟು ಹಾಕುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕರು ಧಮಾರ್ಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹಿಂದೆ ಇದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ ಮಾತನಾಡಿ, ಆ.13 ತುಮಕೂರಿನಲ್ಲಿ ಟೌನ್ಹಾಲ್ ವೃತ್ತದಿಂದ ಬೃಹತ್ ಜಾಥಾ ಏರ್ಪಡಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಸ್ವಇಚ್ಛೆಯಿಂದ ಬರಬೇಕು. ಪೂಜ್ಯರ ಋಣ ನಮ್ಮ ಮೇಲಿದೆ. ಕೆಲ ಕಿಡಿಗೇಡಿ ಕೆಟ್ಟ ಮನಸು ಹೊಂದಿರುವ ವ್ಯಕ್ತಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಪೂಜ್ಯರು ಹೆಣ್ಣಿನ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರತಿಯೊಬ್ಬರಿಗೂ ಸಹಾಯ ಮಾಡಿದ್ದಾರೆ ಎಂದರು.
ಯೋಜನಾಧಿಕಾರಿ ದಿನೇಶ್ ಮಾತನಾಡಿ ಧರ್ಮಸ್ಥಳಕ್ಕೆ 800 ವರ್ಷಗಳ ಇತಿಹಾಸವಿದೆ. ಪೂಜ್ಯರು ಜ್ಞಾನದ ಪರಂಪರೆಹೆಚ್ಚಿಸಿದ್ದಾರೆ. 1982ರಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಆ ಮೂಲಕ 6 ರಾಷ್ಟ್ರೀಕೃತ ಬ್ಯಾಂಕ್ಗಳ ಸಹಾಯದಿಂದ ಸಮುದಾಯ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದಾರೆ. 2015ರಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮ ಬಡವರಿಗೆ ನೇರವಾಗಿ ತಲುಪುತ್ತದೆ. ರಾಜ್ಯದಲ್ಲಿ 6 ಲಕ್ಷ ಸ್ವಸಹಾಯ ಸಂಘಗಳಿಂದ 64 ಲಕ್ಷ ಜನರಿಗೆ ಸೌಲಭ್ಯ ಒದಗಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಪುಟ್ಟ ಹನುಮಂತರಾಯಪ್ಪ, ಸದಸ್ಯೆ ಲಲಿತಮ್ಮ ಇದ್ದರು.