

ಬೇಲೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿರುವುದರಿಂದ ಅಂತರ್ಜಲ ವೃದ್ಧಿಯಾಗುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸೋಮವಾರ ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಗಡ ಗ್ರಾಮದ ಕಾರೇಹಳ್ಳಿ ಕಟ್ಟೆಕೆರೆ ಅಭಿವೃದ್ಧಿ ಸಮಿತಿ ಮತ್ತು ಕರಗಡ ಗ್ರಾಮಸ್ಥರ ಸಹಕಾರದೊಂದಿಗೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆ ಅಭಿವೃದ್ಧಿಗೊಳಿಸಿ, ಗ್ರಾಮಸ್ಥರಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯ ಅನೇಕ ಕಾರ್ಯಕ್ರಮಗಳಲ್ಲಿ ಕೆರೆ ಅಭಿವೃದ್ಧಿ ಅತ್ಯಂತ ಪ್ರಮುಖವಾದದ್ದು. ಜೀವಿಗಳಿಗೆ ನೀರು ಅಗತ್ಯ ಎಂಬುದನ್ನು ಮನಗಂಡು ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಸಂಸ್ಥೆ ಮುಂದಾಗಿದೆ. ಮನುಷ್ಯನಿಗೆ ಹಸಿವಾದಾಗ ಆಹಾರ ಪಡೆಯಲು ಅನೇಕ ದಾರಿಗಳಿವೆ. ಆದರೆ ನೀರಿಗೆ ನೈಸರ್ಗಿಕವಾಗಿ ಬದಲಿ ದಾರಿ ಇಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಸಂಸ್ಥೆಯಿಂದ ಬಡವರಿಗೆ ಮನೆ, ಮಾಸಾಶನ ಕೊಡುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸಿರುವುದು ಉತ್ತಮ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್‌ರಾವ್ ಮಾತನಾಡಿ, ಹದಿನಾರು ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ಹೆದ್ದಾರಿ ರಸ್ತೆ ಪಕ್ಕದಲ್ಲಿ ಸುಂದರವಾದ ಕೆರೆ ನಿರ್ಮಾಣವಾಗಿದೆ. ವಾಕಿಂಗ್ ಪಾತ್ ನಿರ್ಮಿಸಿ ಉದ್ಯಾನವನ ಮಾಡಿದರೆ, ಪ್ರವಾಸಿಗರು ತಮ್ಮ ವಾಹನವನ್ನು ನಿಲ್ಲಿಸಿ ಇದರ ಸೌಂದರ್ಯವನ್ನು ಸವಿದು ಮುಂದೆ ಸಾಗುತ್ತಾರೆ. ಈ ನಿಟ್ಟಿನಲ್ಲಿ ಶಾಸಕರು ಪ್ರವಾಸಿ ಸ್ಥಳವನ್ನಾಗಿಸಲು ಮುಂದಾಗಬೇಕು. ಊರಿನ ಕೆರೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ಪಂಚಾಯಿತಿಯಲ್ಲಿ ಸಾಕಷ್ಟು ಅನುದಾನವಿರದಿದ್ದರೆ ಇಂತಹ ಕೆರೆಗಳ ಅಭಿವೃದ್ಧಿಯಾಗುವುದಿಲ್ಲ. ಆದ್ದರಿಂದ ನಾವು ಗ್ರಾಮ ಪಂಚಾಯಿತಿಗಳೊಂದಿಗೆ ಕೈಜೋಡಿಸಿ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದೇವೆ ಎಂದರು.
ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್, ಗ್ರಾಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಪ್ರಶಾಂತ್, ಪಿಡಿಒ ಸಹನಾ, ಮುಖಂಡರಾದ ಪೂರ್ಣೇಶ್, ಮಂಜುನಾಥ್, ದೇವರಾಜ್, ಚೆನ್ನೇಗೌಡ, ತೀರ್ಥಕುಮಾರ್ ಸೇರಿದಂತೆ ಇತರರಿದ್ದರು.