

ಮೊಳಕಾಲ್ಮೂರು: ಕೇಂದ್ರ ಸರ್ಕಾರದ ಜಲಶಕ್ತಿ ಯೋಜನೆ ಉನ್ನತ ಅಧಿಕಾರಿಗಳ ತಂಡ ಇತ್ತೀಚೆಗೆ ತಾಲೂಕಿನ ಹಲವೆಡೆ ಭೇಟಿ ನೀಡಿ ಜಲಸಂರಕ್ಷಣೆ ಬಗ್ಗೆ ಪರಿವೀಕ್ಷಣೆ ನಡೆಸಿದರು.
ತಾಲೂಕಿನ ಹುಚ್ಚಂಗಿದುರ್ಗದ ಅಮೃತ ಸರೋವರ ಕೆರೆ ವೀಕ್ಷಣೆ ಮಾಡಿದ ಬಳಿಕ ಜಲಶಕ್ತಿ ಯೋಜನೆ ಉನ್ನತ ಅಧಿಕಾರಿ ಮಯಾಂಕ್ ದೀಕ್ಷಿತ್ ಮಾತನಾಡಿ, ಬರಪೀಡಿತಕ್ಕೆ ತುತ್ತಾದ ಪ್ರದೇಶದಲ್ಲಿ ಅಂತರ್ಜಜಲ ಹೆಚ್ಚಳಕ್ಕೆ ಪೂರಕವಾಗಿ ಮಳೆ ನೀರು ಸಂಗ್ರಣೆಗೆ ಚೆಕ್‌ಡ್ಯಾಂ, ಕಲ್ಯಾಣಿ ಹಾಗೂ ಕೆರೆ, ಕಟ್ಟೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ವಿಶೇಷವಾಗಿ ಅರಣ್ಯ ವ್ಯಾಪ್ತಿಯಲ್ಲಿ ಸಮಗ್ರ ಕಾಡು ಬೆಳವಣಿಗೆ ಹಾಗೂ ತಗ್ಗು ಪ್ರದೇಶಗಳಲ್ಲಿ ಇಂಗು ಗುಂಡಿಗಳ ನಿರ್ಮಾಣಕ್ಕೆ ಪ್ರಾಧಾನ್ಯ ಕೊಡಬೇಕು. ಅರ್ಥವಿಲ್ಲದ ಅನುದಾನ ದುರ್ಬಳಕೆಗೆ ಆಸ್ಪದ ಇಲ್ಲ ಎಂದು ಹೇಳಿದರು.
ನಂತರ ನಾಗಸಮುದ್ರ, ರಾಂಪುರ, ತಮ್ಮೇನಹಳ್ಳಿ ಸೇರಿ ಜಲಶಕ್ತಿ ಯೋಜನೆಯ ಕಾಮಗಾರಿಗಳ ಬಗ್ಗೆ ಪರಿವೀಕ್ಷಣೆ ಮಾಡಿದರು.
ಕೇಂದ್ರ ತಂಡದ ಅಧಿಕಾರಿ ಚಕ್ರವರ್ತಿ, ತಾಲೂಕು ನೋಡಲ್ ಅಧಿಕಾರಿ ಪ್ರಭಾಕರ, ತಾಪಂ ಇಒ ಹನುಂತಪ್ಪ, ಎಡಿಎ ಗಣೇಶ್, ಕೃಷಿ ಅಧಿಕಾರಿ ಪ್ರಕಾಶ್, ಮದುಸೂಧನ್ ಇದ್ದರು.