

ನೆಲಮಂಗಲ : ಭೂಮಿಯಲ್ಲಿ ಅಂತರ್ಜಲಮಟ್ಟ ಹೆಚ್ಚುವಲ್ಲಿ ವೃಷಭಾವತಿ ಯೋಜನೆ ಸಾಕಷ್ಟು ಸಹಕಾರಿಯಾಗಿದೆ ಎಂದು ನೆ.ಯೋ.ಪ್ರಾಧಿಕಾರ ಸದಸ್ಯ ಬಿ.ಜಿ.ವಾಸು ತಿಳಿಸಿದರು. ನಗರದಲ್ಲಿನ ರಾಜಗಾಲುವೆ ಪರಿಶೀಲಿಸಿ ಮಾತನಾಡಿದ ಅವರು, ವೃಷಭಾವತಿ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಮುಂದಾಗಿರುವ ಶಾಸಕರ ಕಾರ್ಯ ಮಹತ್ವದ್ದು.
ವೃಷಭಾವತಿ ಯೋಜನೆ ಬಗ್ಗೆ ಕೆಲವರು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ನೀರು ಸಂಸ್ಕರಣೆ ಮಾಡಿದ್ದು, ಕುಡಿಯುವ ನೀಡುವ ನೀರಲ್ಲ. ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆಯಾಗಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಸಾವಿರಾರು ಅಡಿ ಬೋರ್ವೆಲ್ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಬಿನ್ನಮಂಗಲ ಕೆರೆ ಸಾಕಷ್ಟು ಕಲುಷಿತ ಹಾಗೂ ಕೊಳಚೆ ನೀರಾಗಿದೆ. ಸುಮಾರು ದಶಕಗಳಿಂದ ಈ ಭಾಗದ ಜನರು ಬೋರ್ ವೆಲ್ ಮೂಲಕ ಆ ನೀರನ್ನು ಕುಡಿಯುತ್ತಿದ್ದಾರೆ. ನಾವು ಕೂಡ ಇದೇ ನೀರನ್ನು ಕುಡಿಯುತ್ತಿದ್ದು, ಅರೋಗ್ಯವಾಗಿದ್ದೇವೆ. ಬಿನ್ನಮಂಗಲ ಕೆರೆ ನೀರಿಗೆ ಹೊಲಿಕೆ ಮಾಡಿದರೇ ವೃಷಭಾವತಿ ಯೋಜನೆ ನೀರು ಉತ್ತಮವಾಗಿದೆ. ಕೆರೆಗಳ ಅಭಿವೃದ್ಧಿಗೆ ಶಾಸಕರು ಅನುದಾನವನ್ನು ಮೀಸಲಿಸಿದ್ದು, ಅದೃಷ್ಟು ಬೇಗ ಕೆರೆಗಳನ್ನು ಅಭಿವೃದ್ಧಿಪಡಿಸಿ ಕೂಡಲೇ ವೃಷಭಾವತಿ ಯೋಜನೆ ನೀರನ್ನು ಕೆರೆಗೆ ಹಾಯಿಸಲಾಗುವುದು ಎಂದರು. ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿ ಮೂರ್ತಿ ಮಾತನಾಡಿ, ವೃಷಭಾವತಿ ಯೋಜನೆ ಬಗ್ಗೆ ಅರಿವಿಲ್ಲದೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೃಷಭಾವತಿ ಶುದ್ಧೀಕರಣ ಟಕದಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವ ಕಾರ್ಯ ನಡೆಸುತ್ತಿದೆ. ಶಾಶ್ವತ ಅಂತರ್ಜಲಮಟ್ಟ ಹೆಚ್ಚಿಸುವ ಯೋಜನೆ ಇದಾಗಿದ್ದು,ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕರ ವಿರುದ್ಧ ವಾಗ್ದಾಳಿ : ಬಿಎಂಎಲ್.ಕೃಷ್ಣಪ್ಪ ಹಾಗೂ ಕಾಂತರಾಜು ಅವರ ಹೆಸರು ಹೇಳಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಬಿನ್ನಮಂಗಲ ಗ್ರಾಮದ ಅಭಿವೃದ್ಧಿಗೆ ಒಂದು ರೂಪಾಯಿ ನೀಡಿಲ್ಲ. ಕೆರೆಗಳನ್ನು ಶುದ್ಧೀಕರಣ ಮಾಡಿಲ್ಲ. ಶಾಸಕ ಎನ್.ಶ್ರೀನಿವಾಸ್ ಅವರು ಕೆರೆಗೆ ನೀರು ಹರಿಸುತ್ತಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಸರಿಯಲ್ಲ. ನಿಮ್ಮ ಅಧಿಕಾರದ ಅವಧಿಯಲ್ಲಿ ಏನು ಕೆಲಸ ಮಾಡಿದ್ದೀರಿ ಎಂದು ಜನರಿಗೆ ತಿಳಿದಿದೆ ಎಂದು ನೆ.ಯೋ.ಪ್ರಾಧಿಕಾರ ಸದಸ್ಯ ಬಿ.ಜಿ.ವಾಸು ವಾಗ್ದಾಳಿ ನಡೆಸಿದರು.