ಶೇಂಗಾ ಇಳುವರಿ ಕುಂಠಿತ: ಸಂಕಷ್ಟದ ಸುಳಿಯಲ್ಲಿ ರೈತ

GROUNDNUT
Published on

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಮಸಾರಿ ಭೂಮಿಯಲ್ಲಿ ಬೆಳೆಯಲಾದ ಶೇಂಗಾ ಇಳುವರಿ ಕುಂಠಿತಗೊಂಡಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನರೇಗಲ್ಲ. ಕೋಡಿಕೊಪ್ಪ, ಕೋಚಲಾಪೂರ, ಮಲ್ಲಾಪೂರ, ದ್ಯಾಂಪೂರ, ತೋಟಗಂಟಿ, ಅಬ್ಬಿಗೇರಿ, ಜಕ್ಕಲಿ, ಬೂದಿಹಾಳ ಸೇರಿ ಹೋಬಳಿಯಾದ್ಯಂತ ಮಸಾರಿ ಭೂಮಿಯಲ್ಲಿ ಪ್ರಮುಖ ಮುಂಗಾರಿ ವಾಣಿಜ್ಯ ಬೆಳೆಯಾದ ಶೇಂಗಾವನ್ನು ಮಳೆಯಾಶ್ರಿತ 8000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಾಯಿ ಕಟ್ಟುವ ಸಂದರ್ಭದಲ್ಲಿ ಅತಿಯಾದ ಮಳೆಯಾದ ಕಾರಣ ಗಿಡ ಹುಲುಸಾಗಿ ಬೆಳೆದರೂ ಕಾಯಿ ಕಟ್ಟುವು ಪ್ರಮಾಣ ಇಳಿಕೆಯಾಗಿದೆ. ಗಿಡವೊಂದರಲ್ಲಿ 4-5 ಕಾಯಿಗಳು ಬೆಳೆದಿವೆ.

ಕಾಯಿ ಇಲ್ಲ ಬರಿ ಹೊಟ್ಟು: ಶೇಂಗಾ ಬೆಳೆಯನ್ನು ದನಕರುಗಳಿಗೆ ಹೊಟ್ಟು ಆಗುತ್ತದೆ ಎಂಬ ಉದ್ದೇಶದಿಂದ ಬಿತ್ತನೆ ಮಾಡಲಾಗುತ್ತದೆ. ಶೇಂಗಾ ಹೊಟ್ಟನ್ನು ಜಾನುವಾರುಗಳು ಇಷ್ಟಪಟ್ಟು ತಿನ್ನುತ್ತವೆ ಹಾಗೂ ಶೇಂಗಾ ಹೊಟ್ಟಿನಲ್ಲಿ ಹೆಚ್ಚಿನ ಪೊಷಕಾಂಶ ಇರುವುದರಿಂದ ಜಾನುವಾರುಗಳ ಆರೋಗ್ಯಕ್ಕೂ ಉತ್ತಮವಾದ ಆಹಾರವಾಗಿದೆ. ಈ ಕಾರಣಕ್ಕಾಗಿಯೂ ರೈತರು ತಮಗೆ ಶೇಂಗಾ ಬಂದರೆ ಜಾನುವಾರುಗಳಿಗೆ ಹೊಟ್ಟು ಬರುತ್ತದೆ ಎಂದು ಶೇಂಗಾ ಬಿತ್ತನೆ ಮಾಡುತ್ತಾರೆ. ಪ್ರಸಕ್ತ ವರ್ಷ ಉತ್ತಮ ಹೊಟ್ಟು ಮಾತ್ರ ಬಂದಿದ್ದು ಶೇಂಗಾ ಬರದೇ ಇರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ದರ ಕುಸಿತ: ಶೇಂಗಾ ಕಟಾವು ಪ್ರಾರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಕಳೆದ ವಾರ ಪ್ರತಿ ಕ್ವಿಂಟಾಲ್‌ಗೆ 8-9 ಸಾವಿರ ರೂ. ಇದ್ದ ಬೆಲೆ ಈಗ ಕನಿಷ್ಠ ಬೆಲೆ ರೂ. 2089, ಗರಿಷ್ಠ ರೂ. 6569 ಮಧ್ಯಮ ರೂ. 4938ಕ್ಕೆ ಕುಸಿತ ಕಂಡಿದೆ. ಮೊದಲೇ ಇಳುವರಿಯಿಲ್ಲ. ಇರುವ ಇಳುವರಿಯಲ್ಲಿ ಉತ್ತಮ ಬೆಲೆ ಪಡೆಯಬೇಕೆಂದರೆ ಈಗ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ.

ಶೇಂಗಾ ಬೆಳೆಯನ್ನು ಪ್ರತಿವರ್ಷ ಒಂದೇ ಜಮೀನಿನಲ್ಲಿ ಬೆಳೆದರೆ ಭೂಮಿಯ ಫಲವತ್ತತೆ ಕಡಿಮೆಯಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಆದರೂ, ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯಿಂದಾಗಿ ಇಳುವರಿ ಸಾಕಷ್ಟು ಕುಂಠಿತಗೊಂಡಿದೆ. ಪ್ರತಿ ವರ್ಷ ಬೇರೆ ಬೇರೆ ಬೆಳೆಗಳ ಆವರ್ತನ ಮಾಡುವುದರಿಂದ ಮತ್ತು ಅಂತರ ಬೆಳೆ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಸುಧಾರಿಸುತ್ತದೆ. ರವೀಂದ್ರಗೌಡ ಪಾಟೀಲ, ಸಹಾಯಕ ನಿರ್ದೆಶಕರು ಕೃಷಿ ಇಲಾಖೆ ರೋಣ ಒಂದು ಎಕರೆ ಮಸಾರಿ ಭೂಮಿಯಲ್ಲಿ ಶೇಂಗಾ ಬಿತ್ತನೆಗೆ 10 ಸಾವಿರ ರೂ. ಖರ್ಚು ಬರುತ್ತದೆ. ರಾಶಿ ಮಾಡಿ ಫಸಲು ಪಡೆಯಲು 18-20 ಸಾವಿರ ರೂ. ಖರ್ಚಾಗುತ್ತದೆ. ಆದರೆ, ಈ ವರ್ಷ ಒಂದು ಎಕರೆಗೆ 2-3 ಚೀಲ ಇಳುವರಿ ಬರುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಸರ್ಕಾರ ಬರ ಪರಿಹಾರ ಘೋಷಣೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು. ಶಂಕರಗೌಡ ಅಯ್ಯನಗೌಡ್ರ, ಯಮನೂರಸಾಬ ಗೂಡುರ, ಕೋಚಲಾಪುರ ಗ್ರಾಮದ ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net