

ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನಲ್ಲಿ ಒಂದು ಕಾಲಕ್ಕೆ ಶೇಂಗಾ ಬೆಳೆಯೇ ಪ್ರಧಾನವಾಗಿತ್ತು. ಮಳೆಯಾಶ್ರಿತ ಬೆಳೆಯಾಗಿದ್ದರೂ ಒಬ್ಬ ರೈತ ಒಂದು ಎಕರೆ ಭೂಮಿಯಲ್ಲಿ 30 ಚೀಲ ಶೇಂಗಾ ಬೆಳೆಯುವ ಕೃಷಿ ಸಂಭ್ರಮದಿಂದ ಕೂಡಿತ್ತು.
ಆದರೆ, ಈಚೆಗೆ ಹತ್ತು ವರ್ಷಗಳಿಂದ ಮಳೆಯ ಅತಿವೃಷ್ಟಿ, ಅನಾವೃಷ್ಟಿ ವೈಪರೀತ್ಯದಿಂದ ಶೇಂಗಾ ಬೆಳೆ ರೈತರ ಕೈಗೆಟುಕುತ್ತಿಲ್ಲ.
ಕಳೆದ ವರ್ಷ ಸಂಪೂರ್ಣ ಮಳೆಯ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸಬೇಕಾಯಿತು. ಪ್ರಸ್ತಕ ವರ್ಷ ರೈತರಲ್ಲಿ ಆಸೆ ಹುಟ್ಟುವ ರೀತಿ ಮುಂಗಾರು ಪೂರ್ವದಲ್ಲಿ ಉತ್ತಮವಾಗಿತ್ತು.
1 ಲಕ್ಷ ಹೆಕ್ಟೇರು ಶೇಂಗಾ ಬಿತ್ತನೆಗೆ ಭೂಮಿ ಹಸನು ಮಾಡಿಕೊಂಡ ರೈತರು, ಬೀಜ, ಗೊಬ್ಬರ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ, ಈಚೆಗೆ ಮಳೆ ಕುಂಠಿತವಾದ ಹಿನ್ನೆಲೆಯಲ್ಲಿ ವಾರ್ಷಿಕ ಬಿತ್ತನೆ ಗುರಿ ಸಾಧನೆಯಾಗದೆ ಶೇ.50ರಷ್ಟು ಮಾತ್ರ ಬಿತ್ತನೆಯಾಗಿದೆ. ಜುಲೈ ಅಂತ್ಯಕ್ಕೆ 74 ಸಾವಿರ ಹೆಕ್ಟೇರ್ ಬಿತ್ತನೆ ಆಗಬೇಕಿದ್ದ ಪ್ರಮಾಣದಲ್ಲಿ 30 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. 6200 ಹೆ. ಗುರಿಯಲ್ಲಿ 4165 ಹೆ. ಬಿತ್ತಲಾಗಿದೆ.
ವರ್ಷದ ವಾಡಿಕೆ 175 ಮಿಮೀ ಮಳೆ ಪ್ರಮಾಣಕ್ಕೆ ಅಧಿಕವಾಗಿ 257 ಮಿಮೀ ಮಳೆಯಾಗಿರುವ ವರದಿ ಇದೆ. ರಾಜ್ಯದ ಬೇರೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.
ತಾಲೂಕಿನಲ್ಲಿ ಕಡಿಮೆಯಾಗಿದೆ. ಇದರಿಂದ ಈಗಾಗಲೇ ಬಿತ್ತನೆ ಮಾಡಿರುವ ರೈತರಲ್ಲೂ ಈ ವರ್ಷವು ಬೆಳೆ ಕೈಗೆ ಸಿಗುವ ನಂಬಿಕೆ ಇಲ್ಲ ಎನ್ನುವ ಆತಂಕ ಮನೆಮಾಡಿದೆ.
ಸಿರಿಧಾನ್ಯ: ಕಡಿಮೆ ಮಳೆ ನೀರಿಗೆ ಮತ್ತು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಬೆಳೆಯುವ ಸಿರಿಧಾನ್ಯ ಬೆಳೆಗಳ ಕಡೆ ತಾಲೂಕಿನ ರೈತರ ಒಲವು ಕಂಡು ಬಂದಿದೆ. ನಾಲ್ಕು ತಿಂಗಳ ಬೆಳೆಯಾಗಿ ಶೇಂಗಾ ಕಟಾವಿಗೆ ಬರುತ್ತದೆ. ಮೂರು ತಿಂಗಳೊಳಗೆ ಸಿರಿಧಾನ್ಯ ಬೆಳೆ ಕೈಗೆ ಸಿಗುತ್ತದೆ ಎನ್ನುವ ರೈತರು ಆಸಕ್ತಿ ತೊರಿಸುತ್ತಿದ್ದಾರೆ.
ಕೇವಲ 700 ಎಕರೆ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದ್ದ ತಾಲೂಕಿನಲ್ಲಿ ಪ್ರಸ್ತಕ ವರ್ಷ 1700 ಎಕರೆಯಲ್ಲಿ ಸಿರಿಧಾನ್ಯ ಬೆಳೆಗಳಾದ ಸಾವೆ, ನವಣೆ, ಹರಕ, ಕೊರಲೆ ಬಿತ್ತನೆ ಮಾಡಲಾಗಿದೆ. ಬೆಳಗೆರೆ, ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಾಪರಹಳ್ಳಿ, ಜಡೇಕುಂಟೆ, ಗೊರ್ಲತ್ತು, ನಾರಾಯಣಪುರದಲ್ಲಿ ಹೆಚ್ಚಾಗಿ ಬಿತ್ತನೆ ಮಾಡಿರುವುದು ಕಂಡು ಬಂದಿದೆ.
ತಾಲೂಕಿನಲ್ಲಿ ಪ್ರಸ್ತಕ ವರ್ಷ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಶೇಂಗಾ ಬಿತ್ತನೆ ನೆಡದಿಲ್ಲ. ಒಂದು ಲಕ್ಷ ಹೆಕ್ಟೇರ್ ಗುರಿಯಲ್ಲಿ ಕೇವಲ ಶೇ.50ರಷ್ಟು ಬಿತ್ತನೆ ಮಾಡಲಾಗಿದೆ. ಇಲಾಖೆ ವತಿಯಿಂದ ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ_.ಡಾ.ಜೆ.ಅಶೋಕ್, ಸಹಾಯ ನಿರ್ದೇಶಕ, ಕೃಷಿ ಇಲಾಖೆ, ಚಳ್ಳಕೆರೆಜುಲೈ ತಿಂಗಳಲ್ಲಿ ಆರಂಭವಾಗುವ ಪುನರ್ವಸು, ಪುಷ್ಯ ಮಳೆಗಳಲ್ಲಿ ಬಿತ್ತವುದರಿಂದ ಫಸಲು ಕೈ ಹಿಡಿಯುತ್ತದೆ ಎನ್ನುವ ನಂಬಿಕೆ ರೈತರಲ್ಲಿ ಈಗಲೂ ಇದೆ. ಮುಂಗಾರು ಪೂರ್ವದಲ್ಲೇ ಮಳೆ ಬಂದಿದ್ದರೂ ಬಿತ್ತನೆಗೆ ರೈತ ಮನಸ್ಸು ಮಾಡುವುದಿಲ್ಲ. ಈಗ ಬಿತ್ತುಲು ಸುಸಂದರ್ಬ. ಆದರೆ, ಮಳೆ ಅತಂತ್ರವಾಗಿರುವುದರಿಂದ ನಿರೀಕ್ಷಿತ ಬಿತ್ತನೆ ಕಾರ್ಯ ನಡೆಯುತ್ತಿಲ್ಲ.ಸಿ.ಜಿ.ತಿಪ್ಪೇಸ್ವಾಮಿ, ರೈತ, ಚಟ್ಟೇಕಂಬ