ನೆಲಕಚ್ಚಿದ ಕುಂಬಾರರ ಕುಲಕಸುಬು: ಮೆಟ್ರಿಯಲ್ಲಿ ಮಾತ್ರ ಒಂದು ಕುಟುಂಬದಿಂದ ಮುಂದುವರಿಕೆ

11 KAMPLI 03A
ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಮಣ್ಣಿನ ಬಿಂದಿಗೆ ತಯಾರಿಸುವಲ್ಲಿ ನಿರತರಾದ ಜಡೆಪ್ಪ.
Published on

ಕಂಪ್ಲಿ: ಆಧುನಿಕತೆ ಭರಾಟೆಗೆ ತಾಲೂಕಿನಲ್ಲಿ ಕುಂಬಾರಿಕೆ ವೃತ್ತಿ ನೆಲ ಕಚ್ಚಿದ್ದು, ಮೆಟ್ರಿ ಗ್ರಾಮದಲ್ಲಿ ಒಂದು ಕುಟುಂಬ ಮಾತ್ರ ಮುಂದುವರಿಸಿಕೊಂಡು ಹೋಗುತ್ತಿದ್ದರೂ ಕುಲಕಸುಬು ತೆವಳುತ್ತಾ ಸಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಹ ಕುಂಬಾರಿಕೆ ಕಾರ್ಯ ಸ್ತಬ್ಧವಾಗಿದೆ

ಪಟ್ಟಣದ ಕುಂಬಾರ ಓಣಿಯಲ್ಲಿ ಹದಿನೈದು ವರ್ಷಗಳಿಂದ ಮಣ್ಣಿನ ಮಡಕೆ ತಯಾರಿಸುವ ಕಾರ್ಯ ಸ್ಥಗಿತಗೊಂಡಿದೆ. ತಾಲೂಕಿನ ಮೆಟ್ರಿ, ರಾಮಸಾಗರ, ಕಣ್ವಿ ತಿಮ್ಮಲಾಪುರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಸಹ ಕುಂಬಾರಿಕೆ ಕಾರ್ಯ ಸ್ತಬ್ಧವಾಗಿದೆ. ಸದ್ಯ ಮೆಟ್ರಿ ಗ್ರಾಮದಲ್ಲಿ ತೆಲುಗು ಕುಂಬಾರ ಕಾಲುವೆ ಜಡೆಪ್ಪ ಕುಟುಂಬ ಮಾತ್ರ ಕುಂಬಾರಿಕೆ ಕಲೆ ನೆಚ್ಚಿಕೊಂಡಿದೆ. ಈ ಕುಟುಂಬ ಕೃಷಿಯೊಡನೆ ಕುಂಬಾರಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಮೊಹರಂ ಹತ್ತಿರವಾಗುತ್ತಿದ್ದಂತೆ ಮಣ್ಣಿನ ಬಿಂದಿಗೆೆ, ಮುಚ್ಚುಳ, ಪಂಚಾರತಿಗಳು, ಬೇಸಿಗೆ ಸಂದರ್ಭದಲ್ಲಿ ಮಡಕೆ, ಹೂಜಿಗಳನ್ನು, ದೀಪಾವಳಿ ವೇಳೆಯಲ್ಲಿ ಪ್ರಣತಿ ತಯಾರಿಸುತ್ತಾರೆ. ಬೇರಿಂಗ್ ತಿಗರಿ ಅಳವಡಿಸಿಕೊಂಡು ಕುಂಬಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ.

ಗ್ಯಾಸ್ ಸಿಲಿಂಡರ್ ಬಂದ ನಂತರ ಮಣ್ಣಿನ ಪಾತ್ರೆಗಳ ಔಚಿತ್ಯ ಕುಂಠಿತ

ಗ್ಯಾಸ್ ಸಿಲಿಂಡರ್ ಬಂದ ನಂತರ ಮಣ್ಣಿನ ಪಾತ್ರೆಗಳ ಔಚಿತ್ಯ ಕುಂಠಿತಗೊಂಡಿತು. ಆಧುನಿಕತೆಯಿಂದ ಮಣ್ಣಿನ ಬದಲಿಗೆ ಆಕರ್ಷಕ ಪ್ಲಾಸ್ಟಿಕ್, ಪೈಬರ್, ಚೀನಿ ಕಲೆಯ ಪಿಂಗಾಣಿ, ಗಾಜಿನ ಪಾತ್ರೆ, ಪ್ಲೇಟ್‌ಗಳಿಗೆ ಜನ ಮಾರು ಹೋಗಿದ್ದಾರೆ. ಕುಂಬಾರಿಕೆಗೆ ಅಗತ್ಯವಿದ್ದ ಜೇಡಿ ಮಣ್ಣಿನ ಸಂಪನ್ಮೂಲ ಕೊರತೆಯಾಗುತ್ತಿದೆ. ಮಣ್ಣು ತಂದು ಹದ ಮಾಡಿ ತಿಗರಿ ತಿರುಗಿಸಿ ಮೈಕೈಯೆಲ್ಲ ಮಣ್ಣು ಮಾಡಿಕೊಂಡು ಮಣ್ಣಿನ ಗಡಿಗೆ ತಯಾರು ಮಾಡುವಷ್ಟು ವ್ಯವಧಾನ ಇಲ್ಲದೆ, ಕೃಷಿ ಕೂಲಿ, ನರೇಗಾ ಸೇರಿ ಇತರ ಕೆಲಸಗಳಿಗೆ ಹೋಗುತ್ತಿದ್ದು, ಯುವಜನತೆಗೆ ಆಸಕ್ತಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜಡೆಪ್ಪ.

ಕುಂಬಾರಿಕೆ ಕಲೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು

ಪಟ್ಟಣದಲ್ಲಿ ಕುಂಬಾರಿಕೆ ನಿಂತಿದ್ದರಿಂದ ಕುಂಬಾರ ಮನೆತನದ ಮೂರ‌್ನಾಲ್ಕು ಮನೆತನಗಳಿದ್ದು, ವೆಂಕಟಾಪುರ ಸೇರಿ ಬೇರೆಡೆಗಳಿಂದ ಮಣ್ಣಿನ ಪಾತ್ರೆಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಜನನವಾದಾಗ ನವಜಾತ ಶಿಶುವಿನ ಮಾಸವನ್ನು ಹೂಳಿಡಲು ಗಡಿಗೆಯನ್ನು, ವ್ಯಕ್ತಿ ಸತ್ತಾಗ ಕಿಚ್ಚು, ನೀರು ಒಯ್ಯಲು ಗಡಿಗೆ ಬಳಸುತ್ತಿದ್ದು, ಜನನದಿಂದ ಮರಣತನಕದ ಬಹುತೇಕ ಸಂಸ್ಕಾರಗಳಲ್ಲಿ ಮಣ್ಣಿನ ಗಡಿಗೆ, ಬಿಂದಿಗೆಗಳಿಗೆ ಪ್ರಾಶಸ್ತ್ಯವಿದೆ. ದೊಡ್ಡ ಗಡಿಗೆಯನ್ನು 200 ರೂ, ಬಿಂದಿಗೆಗಳನ್ನು 120 ರೂ., 100 ಪ್ರಣತಿಗಳನ್ನು 200ರೂ.ಗೆ, 5ರೂ.ಗೊಂದು ಮುಚ್ಚುಳ ಮಾರುತ್ತಿದ್ದೇವೆ. ಕುಂಬಾರಿಕೆ ಕಲೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂಬುದು ಜಡೆಪ್ಪ ಕುಟುಂಬದ ಒತ್ತಾಯವಾಗಿದೆ.

ಕಂಪ್ಲಿಯ ಕುಂಬಾರ ಓಣಿಯಲ್ಲಿ ಮಣ್ಣಿನ ಗಡಿಗೆ, ಬಿಂದಿಗೆ, ಪ್ರಣತಿ ಮಾರಲು ಕುಳಿತ ಕುಂಬಾರ ಸಿದ್ದಮ್ಮ.
ಕಂಪ್ಲಿಯ ಕುಂಬಾರ ಓಣಿಯಲ್ಲಿ ಮಣ್ಣಿನ ಗಡಿಗೆ, ಬಿಂದಿಗೆ, ಪ್ರಣತಿ ಮಾರಲು ಕುಳಿತ ಕುಂಬಾರ ಸಿದ್ದಮ್ಮ.

ಕುಂಬಾರಿಕೆ ಕಲೆ ಉಳಿವಿಗೆ ಪ್ರೋತ್ಸಾಹ ಅಗತ್ಯ. ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಂಬಾರಿಕೆಗಾಗಿ ಆಧುನಿಕ ತಿಗರಿ, ಸಲಕರಣೆಗಳನ್ನು, ಸುಡಲು ಭಟ್ಟಿಗಾಗಿ ಜಾಗ, ವಸತಿಗಾಗಿ ನಿವೇಶನದೊಂದಿಗೆ ಮನೆ ನಿರ್ಮಾಣ, ರಿಯಾಯಿತಿ ದರದ ಸಾಲ ಸೌಲಭ್ಯಗಳನ್ನು ಸರ್ಕಾರ ನೀಡಬೇಕು. ಕುಂಬಾರರ ಗಣತಿಯಾಗಬೇಕು. ಚಹ ಸೇವಿಸಲು ಪ್ಲಾಸ್ಟಿಕ್ ಕಪ್ ಬದಲಿಗೆ ಮಣ್ಣಿನ ಕಪ್ ಬಳಸಲು ಸರ್ಕಾರ ಶಿಫಾರಸು ಮಾಡಬೇಕು. ಸರ್ಕಾರವೇ ಮಣ್ಣಿನ ಉತ್ಪಾದನೆಗಳನ್ನು ಖರೀದಿಸಿ ಕುಂಬಾರರನ್ನು ಪ್ರೋತ್ಸಾಹಿಸಬೇಕು.ಕುಂಬಾರ ಸಿದ್ದಪ್ಪ,ಅಧ್ಯಕ್ಷ, ಕುಂಬಾರ ಶಾಲಿವಾಹನ ಸಂಘ, ಮೆಟ್ರಿ ಕುಂಬಾರಿಕೆಗಾಗಿ ನಿವೇಶನ ಸೇರಿ ಅಗತ್ಯ ಸೌಲಭ್ಯಗಳನ್ನು ಗ್ರಾಮಾಡಳಿತದಿಂದ ಪಡೆದುಕೊಳ್ಳಬಹುದಾಗಿದೆ. ಆಧುನಿಕ ಕಲೆ ಸ್ಪರ್ಶ ಮೂಲಕ ಕುಂಬಾರಿಕೆ ಕಲೆಗೆ ವಾಣಿಜ್ಯ ಮೌಲ್ಯ ತಂದುಕೊಳ್ಳಬೇಕಿದೆ.ಆರ್.ಕೆ.ಶ್ರೀಕುಮಾರ್,ತಾಪಂ ಇಒ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net