ದಾವಣಗೆರೆಯಲ್ಲಿ ಅಡಕೆ ಕೃಷಿ ಯಂತ್ರ ಮೇಳ 19ರಿಂದ

Published on

ದಾವಣಗೆರೆ: ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘ ಹಾಗೂ ಕುಣಿಗಲ್‌ನ ಟೆಂಡರ್ ಟುಡೇ ಸಂಸ್ಥೆ ವತಿಯಿಂದ ಅಡಕೆ ಕೃಷಿ ಯಂತ್ರ ಮೇಳ ಸೆ.19, 20ರಂದು ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಜಯಣ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಯಂತ್ರಗಳ ಪ್ರದರ್ಶನ, ವಿಚಾರಗೋಷ್ಠಿ, ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೊಸ ತಾಂತ್ರಿಕತೆಯಿಂದ ಅಡಕೆ ಕೃಷಿಯಲ್ಲಿ ಅಭಿವೃದ್ಧಿ ಮಾಡಲು ರೈತರಿಗೆ ಉಪಯುಕ್ತ ಮಾಹಿತಿ ದೊರೆಯಲಿದೆ. 40ಕ್ಕೂ ಅಧಿಕ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಅಡಕೆ ಒಣಗಿಸುವ ಯಂತ್ರ, ಡ್ರೋಣ್ ಮೂಲಕ ಔಷಧ ಸಿಂಪಡಿಸುವ, ಅಡಕೆ ಒಣಗಿಸುವ ಯಂತ್ರಗಳು ಇರಲಿವೆ ಎಂದು ಹೇಳಿದರು.

ಅಡಕೆಯಿಂದ ಉಪ್ಪಿನಕಾಯಿ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಅಡಕೆ ತ್ಯಾಜ್ಯದಿಂದ ಬಟ್ಟೆ, ಕಾರ್ಡ್‌ಬೋರ್ಡ್, ಸೌಂಡ್‌ಪ್ರೂಫ್ ಉಪಕರಣ, ಪ್ಲೌವುಡ್ ತಯಾರಿಸಲಾಗುತ್ತದೆ. ಅಡಕೆ ಸಿಪ್ಪೆ ಸ್ಥಳೀಯವಾಗಿ ಅನುಪಯುಕ್ತವಾಗುತ್ತಿದ್ದು ಅದರಿಂದ ವಿವಿಧ ವಸ್ತುಗಳನ್ನು ಉತ್ಪಾದಿಸುವ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.

ಸಂಘವು 1999ರಲ್ಲಿ ಆರಂಭವಾಗಿದೆ. ಈ ಭಾಗದಲ್ಲಿ ಅಡಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮೇಳಕ್ಕೆ ಪ್ರವೇಶ ಉಚಿತವಾಗಿದ್ದು ಹೆಚ್ಚು ರೈತರು ಈ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಸಂಘದ ನಿರ್ದೇಶಕ ಎಚ್.ಜಿ.ಮಲ್ಲಿಕಾರ್ಜುನ, ಕಾರ್ಯದರ್ಶಿ ಡಿ.ಎಚ್.ಶಿವಕುಮಾರ್, ಟೆಂಡರ್ ಟುಡೇ ಸಮೂಹದ ಶಿವಾನಂದ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net