

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನೂತನ ಕಟ್ಟಡವನ್ನು 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 6 ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಿ ಬಳಕೆಗೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣ ಮಂಭಾಗದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊದಲು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಬಿಸಿ ಊಟ ಆರಂಭವಾದ ನಂತರ ಶಾಲೆಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಕೆಲ ಶಾಲೆಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಿದ್ದಾರೆ. ರಾಜ್ಯ ಮಟ್ಟದಲ್ಲಿ ಹೆಣ್ಣು ಮಕ್ಕಳು ಪ್ರಥಮ ಸ್ಥಾನ ಪಡೆಯುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಪ್ರತ್ಯೇಕ ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅರವಿಂದ ಬೆಲ್ಲದ ಮಾತನಾಡಿ, ಮಹಿಳಾ ಕಾಲೇಜು ಉತ್ತಮ ಸ್ಥಳದಲ್ಲಿ ಆರಂಭವಾಗಿದೆ. ದಿನದಿಂದ ದಿನಕ್ಕೆ ಮಹಿಳಾ ಕಾಲೇಜು ಬೆಳೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ, ಉನ್ನತ ಶಿಕ್ಷಣ ಸಚಿವರ ಸಹಕಾರ ಮತ್ತು ಕಾಳಜಿಯಿಂದ ನೂತನ ಕಟ್ಟಡ ಕಾಮಗಾರಿ ಆರಂಭವಾಗಿದೆ. ತಮ್ಮ ಅನುದಾನದಲ್ಲಿ ಹಳೇ ಕಟ್ಟಡಕ್ಕೆ ತಾತ್ಕಾಲಿಕ ಹೊದಿಕೆ ಮಾಡಲಾಗಿದೆ. ನಿರಂತರ ಪ್ರಯತ್ನದ ಫಲವಾಗಿ ಇಂದು ನೂತನ ಕಟ್ಟಡದ ಕನಸು ನನಸಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಮೇಯರ್ ರಾಮಪ್ಪ ಬಡಿಗೇರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ ಡಾ.ಗೋಪಾಲ ಬ್ಯಾಕೋಡ, ಪಾಲಿಕೆ ಸದಸ್ಯರಾದ ಸುರೇಶ ಬೇದ್ರೆ, ಡಾ.ಮಯೂರ ಮೋರೆ, ಪ್ರಕಾಶ ಹೊಸಮನಿ, ಇತರರು ಇದ್ದರು. ಡಾ.ಎಸ್.ಎಸ್.ಅಂಗಡಿ ಸ್ವಾಗತಿಸಿದರು.