

ರಾಯಚೂರು ಜಿಲ್ಲೆಯಲ್ಲಿ ಕೆರೆಗಳ ಸಂರಕ್ಷಣೆ ಮೂಲಕ ಅಂತರ್ಜಲ ವೃದ್ಧಿಗಾಗಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸಿದ್ದೇವೆ. ಈ ಭಾಗದ ಕೆರೆಗಳನ್ನು ಅಭಿವೃದ್ಧಿಗೊಳಿಸಲು ನಮ್ಮ ಇಲಾಖೆಯಿಂದ ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ನಗರದ ಗದ್ವಾಲ್ ರಸ್ತೆಯಲ್ಲಿರುವ ತಾಯಮ್ಮ ಕೆರೆಗೆ 1.50 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕುಡಿಯುವ ನೀರಿಗಾಗಿ, ಕೃಷಿ ಚಟುವಟಿಕೆಗಳಿಗಾಗಿ ರೈತರು ಸೇರಿದಂತೆ ಕೆರೆ-ಕಟ್ಟೆಗಳ ನೀರಿನ ಮೇಲೆ ಅವಲಂಬನೆಯಾಗಿದ್ದಾರೆ. ಅಲ್ಲದೆ ಅನೇಕ ಜಲಚರ ಪ್ರಾಣಿ-ಪಕ್ಷಿಗಳು ಅವಲಂಬನೆಯಾಗಿರುವುದರಿಂದ ಅಂತರ್ಜಲ ಸಮೃದ್ಧಿಗಾಗಿ ಎಲ್ಲಾ ಕೆರೆಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿಸಬೇಕು.
ಕೆರೆ ಒತ್ತುವರಿಯನ್ನು ಮಾಡದಂತೆ ಕೆರೆ ವ್ಯಾಪ್ತಿಯ ಭೂಮಿಯನ್ನು ಸಂರಕ್ಷಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಪಾಪರಡ್ಡಿ, ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ಹಿರಿಯರಾದ ಕೆ ಶಾಂತಪ್ಪ, ಜಯಣ್ಣ, ಜಯವಂತ ರಾವ್ ಪತಂಗೆ, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ರಾಜು ಪಟ್ಟಿ, ಸುಭಾಷ್, ಮಾಡಗಿರಿ ನರಸಿಂಹಲು, ಎಇಇ ಲೋಕೇಶ್ ಸೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.