

ಕೆ.ಆರ್.ಸಾಗರ: ಕೆ.ಆರ್.ಸಾಗರ-ಪೇಪರ್ ಮಿಲ್ ಸರ್ಕಲ್‌ನ ರಸ್ತೆ ವಿಸ್ತರಣೆ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ಮಾಡಿದರು.
ಸುಮಾರು 10 ಕೋಟಿ ರೂ. ವೆಚ್ಚದ ಈ ಕಾಮಗಾರಿಯಲ್ಲಿ ಕೆ.ಆರ್.ಸಾಗರ ಅರಳಿಕಟ್ಟೆ ವೃತ್ತದಿಂದ ಪೇಪರ್ ಮಿಲ್ ಸರ್ಕಲ್ ರಸ್ತೆಯ ಎರಡು ಬದಿಯಲ್ಲಿ 1.5 ಮೀಟರ್ ವಿಸ್ತರಣೆ, ಪೂರ್ಣ ರಸ್ತೆಯ ಡಾಂಬರೀಕರಣ, ಅಗತ್ಯವಿದ್ದ ಕಡೆ ಚರಂಡಿ ನಿರ್ಮಾಣ, ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಡೆಯಲಿದೆ.
ಶಾಸಕರು ಮಾತನಾಡಿ, ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಈಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ನಾಲ್ಕು ಪಥದ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ಒತ್ತುವರಿ ಇದ್ದರೂ ತೆರವು ಮಾಡಿ ಕೆಲಸ ಮಾಡಲಾಗುತ್ತದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೆಲವರು ಟೀಕೆ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಆದರೆ ರಾಜ್ಯದ ಜನತೆಗೆ ನಮ್ಮ ಯೋಜನೆ ತಲುಪಿದ್ದು ಅವರ ಆಶೀರ್ವಾದ ಸರ್ಕಾರದ ಮೇಲಿದೆ. ಈ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಅವುಗಳಿಗೆ ಕಿವಿಕೊಡುವುದು ಬೇಡ ಎಂದರು.
ಬೃಂದಾವನ ಪ್ರವೇಶ ದರದ ಶುಲ್ಕ ಹೆಚ್ಚಳ ಮತ್ತು ಟೋಲ್ ಕುರಿತು ಪ್ರಶ್ನೆಗೆ ಉತ್ತರಿಸಿದ ಶಾಸಕರು, ಬೃಂದಾವನದಲ್ಲಿ ಕಾರಂಜಿಗಳು, ಉದ್ಯಾನ ಆಧುನೀಕರಣಗೊಂಡಿದೆ. ಮೂಲಸೌಕರ್ಯ ನೀಡಲಾಗುತ್ತಿದೆ. ಹೀಗಾಗಿ ಶುಲ್ಕ ಹೆಚ್ಚಳವಾಗಿದೆ. 150 ರೂ. ಕೊಟ್ಟು ಕಾಫಿ ಕುಡಿಯುತ್ತಾರೆ, ಬೃಂದಾವನದ ಪ್ರವೇಶ ದರ 100 ರೂ. ಕೊಟ್ಟು ನೋಡಲು ಏನು ಸಮಸ್ಯೆ? ಬೇರೆಡೆ ದರಗಳು ಹೆಚ್ಚಾಗಿವೆ, ಇಲ್ಲಿ ಹಲವು ವರ್ಷಗಳ ನಂತರ ದರ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಶುಲ್ಕ ವಸೂಲಿ ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದ ವಸೂಲಿ ಮಾಡಲಾಗುತ್ತಿದೆ. ಕೆ.ಆರ್.ಸಾಗರದ ಬೃಂದಾವನ-ನಾರ್ತ್ ಬ್ಯಾಂಕ್ ಸೇತುವೆ ನಿರ್ಮಾಣಕ್ಕೆ ಖರ್ಚಾದ ಹಣ ಮತ್ತು ಅಭಿವೃದ್ಧಿ ಕೆಲಸ ಮಾಡಿದ ಹಣ ವಾಪಸ್ ಪಡೆಯಲು ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿಯಂತೆ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದರು.
ನಟ ಕಮಲ ಹಾಸನ್ ಹೇಳಿಕೆ ಖಂಡನಿಯವಾಗಿದೆ. ಯಾರೇ ಆಗಲಿ ಇತರ ಭಾಷೆಯಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಇದರಿಂದ ಅವರ ಘನತೆ ತೋರುತ್ತದೆ. ಅವರು ಕನ್ನಡಕ್ಕೆ ಅಪಮಾನ ಮಾಡಿದ್ದು, ಅವರು ಕನ್ನಡಿಗರ ಕ್ಷಮೇ ಕೋರಬೇಕು ಎಂದು ಆಗ್ರಹಿಸಿದರು.
ಈ ಸಂರ್ಭದಲ್ಲಿ ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷೆ ಜಯಂತಿ ಕಾಳಪ್ಪ, ಹುಲಿಕರೆ ಗ್ರಾಪಂ ಉಪಾಧ್ಯಕ್ಷ ಕರಿಗೌಡ, ಕಾ.ನೀ.ನಿಗಮ ಕಾರ್ಯಪಾಲಕ ಅಭಿಯಂತರ ಜಯಂತ್, ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕ್ ಅಭು, ಸಹಾಯಕ ಅಭಿಯಂತರ ಪುನೀತ್, ಗ್ರಾ.ಪಂ ಸದಸ್ಯರಾದ ನಾಗೇಂದ್ರಕುಮಾರ್, ಜಗದೀಪ್ ಸಿಂಗ್, ದೇವರಾಜು, ರವಿಕುಮಾರ್, ವೈರುಮುಡಿ, ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಗುತ್ತಿಗೆದಾರ ಗೋವಿಂದೇಗೌಡ, ಶಂಕರ್, ಸಂಜು ಇದ್ದರು.