ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅಂತರ್ಜಲ ಮಟ್ಟ

water
Published on
  • ಕೇಶವಮೂರ್ತಿ ವಿ.ಬಿ. ಹಾವೇರಿ

ಕಳೆದ ನಾಲ್ಕೈದು ವರ್ಷಗಳಿಂದ ಸುರಿದ ಉತ್ತಮ ಮಳೆಯಿಂದ ಕೆರೆ, ಕಟ್ಟೆಗಳು ತುಂಬಿದ ಪರಿಣಾಮ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರುಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 15.69 ಮೀಟರ್​ನಷ್ಟು ಸ್ಥಿರ ಅಂತರ್ಜಲ ಮಟ್ಟ ಇದ್ದು, ಇದನ್ನು ಸಂರಕ್ಷಿಸಿದರೆ ಒಂದು ವೇಳೆ ಬರಗಾಲ ಪರಿಸ್ಥಿತಿ ಎದುರಾದರೆ ಸಮರ್ಥವಾಗಿ ನಿಭಾಯಿಸಬಹುದು ಎಂದು ಭೂವಿಜ್ಞಾನಿಗಳು ಸಲಹೆ ನೀಡಿದ್ದಾರೆ.

2019 ಮತ್ತು 2020ರಲ್ಲಿ ಜಿಲ್ಲೆಯಲ್ಲಿ ಮಳೆಯ ಕೊರತೆ ಮತ್ತಿತರ ಕಾರಣಗಳಿಂದಾಗಿ ಅಂತರ್ಜಲ ಮಟ್ಟ ಕುಸಿತ ಕಂಡಿತ್ತು. 2019ರ ಮೇ ತಿಂಗಳಲ್ಲಿ ಸ್ಥಿರ ಅಂತರ್ಜಲ ಮಟ್ಟ 36.93 ಇತ್ತು. 2020ರ ಮೇ ನಲ್ಲಿ 19.41, 2021 ಮೇ ನಲ್ಲಿ 16.83, 2022 ಮೇ ನಲ್ಲಿ 10.10 ಹಾಗೂ 2023ರ ಮೇ ನಲ್ಲಿ 23 ಮೀಟರ್​ವರೆಗೆ ಸ್ಥಿರ ಅಂತರ್ಜಲ ಮಟ್ಟ ಇದೆ. ಜೂನ್, ಜುಲೈನಲ್ಲಿ ಉತ್ತಮವಾದ ಮುಂಗಾರು ಮಳೆಯಾದರೆ ಈ ಪ್ರಮಾಣ ಮತ್ತಷ್ಟು ಸುಧಾರಣೆಯಾಗಲಿದೆ ಎಂಬುದು ಅಂತರ್ಜಲ ನಿರ್ದೇಶನಾಲಯದ ವಿಜ್ಞಾನಿಗಳ ವಾದ.

ಕೃಷಿಗೆ ಶೇ. 80 ಅಂತರ್ಜಲ ಬಳಕೆ ಮಾಡಲಾಗುತ್ತದೆ. ಉಳಿದ ಶೇ. 20 ಮನೆ, ಕೈಗಾರಿಕೆ, ಇತರೆ ಬಳಕೆಗೆ ಬಳಕೆಯಾಗುತ್ತದೆ. ಅಂತರ್ಜಲ ಬಳಸುವವರು ಮಿತವಾಗಿ, ಹಿತವಾಗಿ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಬೇಕು. ರೈತರು ಆದಷ್ಟು ಆಧುನಿಕ ವಿಧಾನದಲ್ಲಿ ಅತಿ ಕಡಿಮೆ ನೀರನ್ನು ಬಳಸಿಕೊಂಡು ಅಧಿಕ ಇಳುವರಿ ಬರುವಂಥ ಬೆಳೆಗಳನ್ನು ಬೆಳೆಯಲು ಮುಂದೆ ಬರಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಆಧುನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಹನಿ ನೀರಾವರಿ, ತುಂತುರು ನೀರಾವರಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಮನೆ, ಇತರ ಕಟ್ಟಡ ನಿರ್ವಿುಸುವಾಗ ನಿಯಮಾವಳಿಗಳನ್ನು ಪಾಲಿಸಬೇಕು. ಈ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಎಲ್ಲರೂ ಕೊಡುಗೆ ನೀಡಬೇಕು ಎನ್ನುತ್ತಾರೆ ಭೂ ವಿಜ್ಞಾನಿಗಳು.

ಭೂಮಿಯ ಆಳದಲ್ಲಿ ಸ್ಯಾಚುರೇಶನ್ ಪಾಯಿಂಟ್​ಗೆ ಬಂದು ನೀರು ನಿಂತಿರುತ್ತದೆ. ಇದು ಸ್ಥಿರ ಅಂತರ್ಜಲ ಮಟ್ಟ. ಇದನ್ನು ದಾಟಿ ಆಳವಾಗಿ ಬೋರ್​ವೆಲ್ ಕೊರೆಸಲಾಗುತ್ತದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಅಂದಾಜು 15ರಿಂದ 20 ಮೀಟರ್ ಆಳದಲ್ಲಿ ಸ್ಥಿರ ಅಂತರ್ಜಲ ಮಟ್ಟ ಇದ್ದರೂ ಕೂಡ 90ರಿಂದ 120 ಮೀಟರ್​ವರೆಗೆ ಹದವಾದ ನೀರು ಸಿಗುತ್ತದೆ. ಹಾವೇರಿ, ರಾಣೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿಯಲ್ಲಿ ಸುಮಾರು 90ರಿಂದ 120 ಮೀಟರ್​ವರೆಗೆ ನೀರು ಸಿಗುತ್ತದೆ. ಬ್ಯಾಡಗಿ, ಹಾನಗಲ್ಲ, ಸವಣೂರ, ಶಿಗ್ಗಾಂವಿ ತಾಲೂಕಿನಲ್ಲಿ 100ರಿಂದ 120 ಮೀಟರ್​ವರೆಗೆ ಅಂತರ್ಜಲ ದೊರೆಯುತ್ತದೆ. ಗರಿಷ್ಠ ಎಂದರೆ ಕೆಲವೆಡೆ 500 ಮೀಟರ್ ಆಳದಲ್ಲಿ ನೀರು ದೊರೆಯುತ್ತದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಂತರ್ಜಲದಲ್ಲಿ ಕೊಂಚ ಕುಸಿತ ಕಂಡು ಬಂದಿದೆ. 2021 ಮೇನಲ್ಲಿ 12.76 ಮೀ., 2022ರ ಮೇನಲ್ಲಿ 7.65 ಮೀ. ಇದ್ದ ಸ್ಥಿರ ಅಂತರ್ಜಲ ಮಟ್ಟ 2023ರ ಮೇನಲ್ಲಿ 15.69ಕ್ಕೆ ತಲುಪಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿ ಮೇನಲ್ಲಿ ಮಳೆಯಾಗಿಲ್ಲ. ಜೂನ್​ನಲ್ಲಿ ಉತ್ತಮ ಮಳೆಯಾಗುವ ಸಂಭವವಿದ್ದು, 6ರಿಂದ 8 ಮೀ.ಗೆ ತಲುಪುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಹಿರಿಯ ಭೂ ವಿಜ್ಞಾನಿ ಸಂತೋಷ ಪ್ಯಾಟಿ ಗಾಣಗೇರ.

42 ಪರೀಕ್ಷಾ ಕೇಂದ್ರಗಳು

ಜಿಲ್ಲೆಯಲ್ಲಿ 42 ಅಂತರ್ಜಲ ಪರೀಕ್ಷಾ ಕೇಂದ್ರಗಳಿವೆ. ಇದರಲ್ಲಿ ಐದು ಬಾವಿಗಳು 37 ಕೊಳವೆ ಬಾವಿಗಳು ಇವೆ. ಡಿಡಬ್ಲುಎಲ್​ಆರ್ ಟೆಲಿಮೆಟ್ರಿ ವಿಧಾನದ ಮೂಲಕ ಆನ್​ಲೈನ್ ಸೆನ್ಸಾರ್​ನಲ್ಲಿ ಅಂತರ್ಜಲ ಮಟ್ಟ ಪರೀಕ್ಷಿಸಲಾಗುತ್ತದೆ. ಇದರ ಜತೆಗೆ ಪ್ರತಿ ತಿಂಗಳು ಎಲ್ಲ ಸ್ಟೇಶನ್​ನಲ್ಲೂ ನೇರವಾಗಿ ಅಂತರ್ಜಲ ಮಟ್ಟ ಪರೀಕ್ಷಿಸಲಾಗುತ್ತದೆ.

2019ರವರೆಗೆ ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಕೊರತೆ ಸೃಷ್ಟಿಯಾಗಿತ್ತು. ನಂತರದ ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಏರುಗತಿಯಲ್ಲಿ ಸಾಗುತ್ತಿದೆ. ಅಂತರ್ಜಲ ಕುಸಿತ ಎಲ್ಲೂ ಕಂಡು ಬಂದಿಲ್ಲ. ಇರುವ ಅಂತರ್ಜಲವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. | ಸಂತೋಷ ಪ್ಯಾಟಿ ಗಾಣಿಗೇರ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ನಿರ್ದೇಶನಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net