ಅಂತರ್ಜಲಕ್ಕೆ ಹೊಡೆತ ಕೊಟ್ಟ ವರುಣ

19mdk02
Published on

ಮಡಿಕೇರಿ:

ಈ ಬಾರಿಯ ಮಳೆ ಕೊರತೆ ಕೊಡಗಿನಲ್ಲಿ ಅಂತರ್ಜಲದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕಳೆದ 10 ವರ್ಷಗಳಲ್ಲಿ ಸರಾಸರಿ 2.99 ಮೀಟರ್‌ನಷ್ಟು ಅಂತರ್ಜಲ ಮಟ್ಟ ಜಿಲ್ಲೆಯಲ್ಲಿ ಇಳಿಕೆ ಆಗಿದೆ. ಈ ವರ್ಷ ಮಳೆ ಕಡಿಮೆಯಾಗಿರುವ ಕಾರಣ ಭೂಮಿಗೆ ಇಂಗುವ ನೀರಿನ ಪ್ರಮಾಣ ಕಡಿಮೆ ಆಗಲಿದೆ. ಕೊಳವೆಬಾವಿಗಳ ಬಳಕೆ ಹೆಚ್ಚುವುದರಿಂದಲೂ ಅಂತರ್ಜಲ ಮಟ್ಟ ಕುಸಿತ ಆಗುವ ಆತಂಕ ಕಾಣಿಸಿಕೊಂಡಿದೆ.

ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಅಂತರ್ಜಲ ವಿಷಯದಲ್ಲಿ ಕೊಡಗು ಸುರಕ್ಷಿತವಾಗಿದೆ ಎಂದೇ ಅಂತರ್ಜಲ ನಿರ್ದೇಶನಾಲಯ ದಾಖಲೆಗಳು ಹೇಳುತ್ತಿದೆ. ಆದರೆ ಕಳೆದ 10 ವರ್ಷಗಳ ಅಂಕಿ-ಅAಶಗಳನ್ನು ಗಮನಿಸಿದರೆ ಆತಂಕಕಾರಿ ಸಂಗತಿಗಳು ಕಂಡುಬರುತ್ತದೆ. 2012ರಿಂದ 2021ರ ತನಕದ 10 ವರ್ಷಗಳ ಸರಾಸರಿ ಲೆಕ್ಕ ನೋಡಿದರೆ ಮಡಿಕೇರಿ ತಾಲೂಕಿನಲ್ಲಿ ಅಂತರ್ಜಲದ ಮಟ್ಟ 9.96 ಮೀ.ಗಳಷ್ಟಿದೆ. ಸೋಮವಾರಪೇಟೆ ತಾಲೂಕಿನಲ್ಲಿ 7.57 ಮೀಟರ್‌ಗಳಷ್ಟಿದ್ದರೆ ವಿರಾಜಪೇಟೆ ತಾಲೂಕಿನಲ್ಲಿ 14.27 ಮೀಟರ್‌ಗಳಷ್ಟಿದೆ.

ಅಂತರ್ಜಲ ನಿರ್ದೇಶನಾಲಯದಿಂದ ಪ್ರತಿ ತಿಂಗಳು ದಾಖಲಿಸುವ ಬಾವಿ, ಕೊಳವೆಬಾವಿಗಳ ಅಂತರ್ಜಲ ಸ್ಥಿರ ಜಲಮಟ್ಟ ಮಾಪನದಂತೆ ವಾರ್ಷಿಕ ಸರಾಸರಿ ಅಂತರ್ಜಲ ಸ್ಥಿರಮಟ್ಟದೊಂದಿಗೆ 2022ರ ವಾರ್ಷಿಕ ಸರಾಸರಿ ಅಂತರ್ಜಲ ಸ್ಥಿರಮಟ್ಟವನ್ನು ಹೋಲಿಸಿದಾಗ 227 ತಾಲೂಕುಗಳ ಪೈಕಿ 32 ತಾಲ್ಲೂಕುಗಳಲ್ಲಿ ಕುಸಿತ ಮತ್ತು 195 ತಾಲ್ಲೂಕುಗಳಲ್ಲಿ ಏರಿಕೆ ಕಂಡು ಬಂದಿದೆ.

2022ರ ಅಂಕಿ-ಅAಶದ ಪ್ರಕಾರ ಮಡಿಕೇರಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ 10.95 ಮೀ., ಸೋಮವಾರಪೇಟೆ ತಾಲೂಕಿನಲ್ಲಿ 9.77 ಮೀ. ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 12.99 ಮೀ. ಕಂಡುಬರುತ್ತದೆ. ಹತ್ತು ವರ್ಷಗಳ ಸರಾಸರಿ ಮತ್ತು 2022ರ ಅಂಕಿ ಅಂಶ ಗಮನಿಸಿದರೆ ವಿರಾಜಪೇಟೆ ತಾಲೂಕಿನಲ್ಲಿ 1.28 ಮೀಟರ್‌ಗಳಷ್ಟು ಅಂತರ್ಜಲ ಮಟ್ಟ ಏರಿಕೆ ಆಗಿದ್ದರೆ, ಮಡಿಕೇರಿ ತಾಲೂಕಿನಲ್ಲಿ 0.98 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಆತಂಕಕಾರಿ ಪ್ರಮಾಣದಲ್ಲಿ 2.20 ಮೀ.ಗಳಷ್ಟು ಅಂತರ್ಜಲಮಟ್ಟ ಕುಸಿದಿರುವುದು ಕಂಡು ಬರುತ್ತದೆ.

ನೀರಾವರಿ ಉದ್ದೇಶಕ್ಕಾಗಿ ಅಂತರ್ಜಲ ಬಳಕೆ ಪ್ರಮಾಣ ಕೊಡಗಿನಲ್ಲಿ ಅತ್ಯಂತ ಕಡಿಮೆ ಇದೆ. ಅಂತರ್ಜಲ ನೀರಾವರಿಯ ಅವಧಿಯೂ ಹೆಚ್ಚೇನೂ ಇಲ್ಲ. ಕೈಗಾರಿಕೆಯ ಉಪಯೋಗಕ್ಕಾಗಿಯೂ ಅಂತರ್ಜಲ ಬಳಕೆಯ ಪ್ರಮಾಣ ಅಷ್ಟೊಂದು ಕಂಡುಬರುವುದಿಲ್ಲ. ಹಾಗಾಗಿ ಅಂತರ್ಜಲ ಬಳಕೆಯ ದೃಷ್ಟಿಯಿಂದ ಅಂತರ್ಜಲ ಸಂಪನ್ಮೂಲ ಮೌಲೀಕರಣ ಆಧಾರದಂತೆ ಕೊಡಗನ್ನು ಸುರಕ್ಷಿತವೆಂದು ವರ್ಗೀಕರಿಸಲಾಗಿದೆ. ಆದರೂ ಅಂತರ್ಜಲ ಮಟ್ಟದ ಸದ್ಯದ ಸ್ಥಿತಿ ಆತಂಕ ಹುಟ್ಟಿಸುವಂತಿದೆ.
ಜಿಲ್ಲೆಯಲ್ಲಿ ಒಟ್ಟು 29 ಅಧ್ಯಯನ ಕೇಂದ್ರಗಳಲ್ಲಿ ಪ್ರತಿ ತಿಂಗಳು ಕೊಳವೆ ಬಾವಿಗಳ ಅಂತರ್ಜಲ ಮಟ್ಟ, ತೋಡು ಮತ್ತು ಬಾವಿಗಳಲ್ಲಿ ಅಂತರ್ಜಲ ಸ್ಥಿರ ಮಟ್ಟದ ಅಳತೆ ಮಾಡಲಾಗುತ್ತದೆ. ಸಮಾಧಾನಕರ ಅಂಶವೆAದರೆ ಜಿಲ್ಲೆಯ ಅಂತರ್ಜಲ ಗುಣಮಟ್ಟ ಸದ್ಯದ ಮಟ್ಟಿಗೆ ಉತ್ತಮವಾಗಿದೆ. ಫ್ಲೋರೈಡ್, ಗಡಸುತನ, ನೈಟ್ರೇಟ್ ಅಂಶಗಳ ಸಮಸ್ಯೆ ಇಲ್ಲ.

ಕಡಿಮೆ ಜನಸಂಖ್ಯೆ, ಅಂತರ್ಜಲ ಕಲುಷಿತಗೊಳ್ಳುವಂತಹ ಕೈಗಾರಿಕೆಗಳಿಲ್ಲದಿರುವುದು, ಜನರಲ್ಲಿ ನೈರ್ಮಲ್ಯತೆಯ ಅರಿವು, ಚದುರಿದ ಜನವಸತಿ ಪ್ರದೇಶ, ಉತ್ತಮ ಮಳೆ, ಭೂಮಿಯ ಅಡಿಯಲ್ಲಿನ ಶಿಲೆಗಳಿಂದ ಉತ್ಪತ್ತಿಯಾಗುವ ಪ್ಲೂರೈಡ್ ಗಡಸುತನದಂತಹ ಶಿಲಾರಚನೆ ಇಲ್ಲದಿರುವುದೇ ಕೊಡಗಿನಲ್ಲಿ ಅಂತರ್ಜಲದ ಗುಣಮಟ್ಟ ಉತ್ತಮವಾಗಿರಲು ಕಾರಣವಾಗಿರುವ ಅಂಶವಾಗಿದೆ. ಆದರೆ ಈಗ ಮಳೆಯ ಪ್ರಮಾಣ ಕಡಿಮೆ ಆಗಿರುವುದಿಂದ ಅಂತರ್ಜಲದ ಗುಣಮಟ್ಟದ ಮೇಲೂ ಪರಿಣಾಮ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕೊಳವೆ ಬಾವಿಗಳ ಸಂಖ್ಯೆ, ಮಿತಿ ಮೀರಿದ ಅಂತರ್ಜಲ ಬಳಕೆ
ಬೇಸಿಗೆಯಲ್ಲಿ ಕಾಫಿಗೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುವುದು, ಶುಂಠಿ ಸೇರಿ ವಾಣಿಜ್ಯ ಬೆಳೆಗಳ ಬೇಸಾಯ ಹೆಚ್ಚಳ, ಭÀತ್ತ ಬೇಸಾಯದ ಭೂಮಿಯ ಪ್ರಮಾಣ ಇಳಿಕೆ, ಎತ್ತರದ ಪ್ರದೇಶದಲ್ಲಿ ಬೇಸಿಗೆಯಲ್ಲಿ ಅಂತರ್ಜಲ ಕುಸಿತ, ಬೇಸಿಗೆಯಲ್ಲಿ ಮಳೆ ವಿಳಂಬ, ಇಳಿಕೆಯಾಗುತ್ತಿರುವ ಅರಣ್ಯ ಪ್ರಮಾಣ ಮತ್ತಿತರ ಕಾರಣಗಳಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ಆಗುತ್ತಿದೆ.
ರಾಜ್ಯದಲ್ಲಿ ಅಂತರ್ಜಲ ಬಳಕೆಗೆ ಅನುಗುಣವಾಗಿ ತಾಲೂಕುಗಳನ್ನು ವರ್ಗೀಕರಿಸಲಾಗಿದೆ. 49 ತಾಲೂಕುಗಳಲ್ಲಿ ಅಂತರ್ಜಲ ಬಳಕೆಯು ವಾರ್ಷಿಕ ಮರುಪೂರಣ ಪ್ರಮಾಣದ ಶೇ.100 ಕ್ಕಿಂತ ಹೆಚ್ಚು ಇದ್ದು ಅಂತರ್ಜಲ ಅತಿಬಳಕೆಯ ತಾಲೂಕುಗಳೆಂದು ಗುರುತಿಸಲಾಗಿದೆ. 11 ತಾಲೂಕುಗಳಲ್ಲಿ ಅಂತರ್ಜಲ ಬಳಕೆಯು ವಾರ್ಷಿಕ ಮರುಪೂರಣ ಪ್ರಮಾಣದ ಶೇ.90 ರಿಂದ 100ರಷ್ಟಿದ್ದು ಕ್ಲಿಷ್ಟಕರ ಎಂದು ಗುರುತಿಸಲಾಗಿದೆ. 35 ತಾಲೂಕುಗಳಲ್ಲಿ ಶೇ.70-ಶೇ.90ರಷ್ಟು ಅಂತರ್ಜಲ ಬಳಕೆ ಆಗುತ್ತಿದ್ದು ಅರೆಕ್ಲಿಷ್ಟಕರ ಎಂದು ಗುರುತಿಸಲಾಗಿದೆ. ಅಂತರ್ಜಲ ಬಳಕೆಯು ವಾರ್ಷಿಕ ಮರುಪೂರಣ ಪ್ರಮಾಣದ ಶೇ.70 ಕ್ಕಿಂತ ಕಡಿಮೆ ಇರುವ 139 ತಾಲ್ಲೂಕುಗಳನ್ನು ಸುರಕ್ಷಿತ ಎಂದು ವರ್ಗೀಕರಿಸಲಾಗಿದ್ದು ಕೊಡಗಿನ ಐದು ತಾಲೂಕುಗಳೂ ಈ ಪಟ್ಟಿಯಲ್ಲಿ ಸೇರಿದೆ.

ಕೊಡಗು ಸೇರಿದಂತೆ ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸಣ್ಣ ನೀರಾವರಿ ಇಲಾಖೆಯಿಂದ ಇಂಗುಕೆÀರೆ, ಚೆಕ್‌ಡ್ಯಾಂ, ಬ್ಯಾರೇಜ್ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅಂತರ್ಜಲ ನಿರ್ದೇಶನಾಲಯದ ವತಿಯಿಂದ ಅಂತರ್ಜಲ ಅಭಿವೃದ್ಧಿ, ಸದ್ಬಳಕೆ ಮತ್ತು ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ತಾಲೂಕು, ಶಾಲಾ ಕಾಲೇಜು ಮಟ್ಟದಲ್ಲಿ ಜನ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಅಂತರ್ಜಲ ಮರುಪೂರಣ ಮತ್ತು - ಸದ್ಬಳಕೆ ಬಗ್ಗೆ ಅರಿವು ಮೂಡಿಸುವ ಹೋರ್ಡಿಂಗ್ಸ್ಗಳನ್ನೂ ಅಳವಡಿಸಲಾಗಿದೆ.

ಅಂತರ್ಜಲವನ್ನು ಅನಿಯಮಿತವಾಗಿ ಮತ್ತು ನಿಯಂತ್ರಣವಿಲ್ಲದ ಬಳಸುತ್ತಿರುವುದನ್ನು ನಿಯಂತ್ರಿಸಲು ಹಾಗೂ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿಗಳು 2012ನ್ನು ಜಾರಿಗೆ ತಂದಿದೆ. ಈ ಅಧಿಸೂಚನೆಯನ್ವಯ ಅಧಿನಿಯಮವನ್ನು ಅನುಷ್ಠಾನಗೊಳಿಸಿ ಕಾರ್ಯನಿರ್ವಹಿಸಲು ಅನುವಾಗುವಂತೆ, ಬೆಂಗಳೂರನ್ನು ಕೇಂದ್ರ ಕಚೇರಿಯನ್ನಾಗಿಸಿ ಕರ್ನಾಟಕ ಅಂತರ್ಜಲ ಪ್ರಾಧಿಕಾರವನ್ನು ರಚಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಒಟ್ಟು 19 ಸದಸ್ಯರನ್ನು ಒಳಗೊಂಡ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಕೆಲಸ ಮಾಡುತ್ತದೆ. ಪ್ರಾಧಿಕಾರದ ಪರವಾಗಿ ಅಧಿನಿಯಮ 2011 ಅನುಷ್ಠಾನವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಟ್ಟು 8 ಸದಸ್ಯರಿರುವ ಜಿಲ್ಲಾ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.


ಮನೆಯ ಛಾವಣಿ ಮೇಲೆ ಬೀಳುವ ಮಳೆ ನೀರು ಸಂಗ್ರಹ, ಕಡಿಮೆ ಇಳಿಜಾರು, ಸಮತಟ್ಟು ಪ್ರದೇಶದಲ್ಲಿ ಕೃತಕ ಮರುಪೂರಣಾ ವ್ಯವಸ್ಥೆ, ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ, ಕೊಳವೆ ಬಾವಿಗಳ ಸಮೀಪ ಇಂಗು ಗುಂಡಿ ನಿರ್ಮಾಣ, ತುಂತುರು, ಹನಿ ನೀರಾವರಿ ಪದ್ಧತಿ ಅಳವಡಿಕೆ, ಕೆರೆಗಳಲ್ಲಿ ಹೂಳು ತೆಗೆಯುವುದು, ಹಳ್ಳಗಳು, ಮಳೆಗಾಲುವೆಗಳಿಗೆ ತಡೆ ಗೋಡೆ ಅಥವಾ ಚೆಕ್ ಡ್ಯಾಮ್ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಮರುಪೂರಣ ಮಾಡಬಹುದಾಗಿದೆ.
ಆದರೆ ಅತಿ ಮಳೆಯಾಗುವ ಎತ್ತರ ಮತ್ತು ಕಡಿದಾದ ಇಳಿಜಾರು ಪ್ರದೇಶದಲ್ಲಿ ಮರುಪೂರಣ ಸಂದರ್ಭ ಎಚ್ಚರಿಕೆ ಅಗತ್ಯ ಎನ್ನುತ್ತಾರೆ ತಜ್ಞರು. ಇಲ್ಲಿ ಅವೈಜ್ಞಾನಿಕವಾಗಿ ಮರುಪೂರಣಾ ವ್ಯವಸ್ಥೆ ಅಳವಡಿಸುವುದು ಭೂಕುಸಿತಗಳಿಗೆ ಕಾರಣವಾಗಬಹುದು. ಅಂತಹ ಪ್ರದೇಶದಲ್ಲಿ ಆದಷ್ಟು ಮಳೆ ನೀರು ಭೂಮಿಗೆ ಇಂಗದAತೆ ನೋಡಿಕೊಳ್ಳಬೇಕು. ಮಳೆ ನೀರು ಕೊಲ್ಲಿಗಳಿಗೆ, ಹಳ್ಳಗಳಿಗೆ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎನ್ನುವ ಸಲಹೆ ಕೊಡುತ್ತಾರೆ

ಅಂತರ್ಜಲ ಸಂಪನ್ಮೂಲ ಮೌಲೀಕರಣವನ್ನು ಗ್ರೌಂಡ್ ವಾಟರ್ ಎಸ್ಟಿಮೇಷನ್ ಕಮಿಟಿ – 2015ರ ಪ್ರಕಾರ ತಾಲೂಕುವಾರು ರಾಜ್ಯದ ಅಂತರ್ಜಲವನ್ನು ಮೌಲೀಕರಿಸಿ ವರ್ಗೀಕರಿಸಲಾಗಿದೆ. ಅಂತರ್ಜಲ ನಿರ್ದೇಶನಾಲಯ ಮತ್ತು ಕೇಂದ್ರೀಯ ಅಂತರ್ಜಲ ಮಂಡಳಿಯವರ ಸಹಯೋಗದೊಂದಿಗೆ ರಾಜ್ಯದ ಅಂತರ್ಜಲ ಮೌಲೀಕರಣವನ್ನು 2002ರ ಮಾರ್ಚ್ ಅಂತ್ಯಕ್ಕೆ ಕೈಗೊಳ್ಳಲಾಗಿದೆ.

  • ಎನ್.ಎಸ್. ಭೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net