

ಹುಳಿಯಾರು : ಪಶು ಆಸ್ಪತ್ರೆ ಮುಂಭಾಗ ನಡೆಯುತ್ತಿರುವ ವಾರದ ಸಂತೆ ಸ್ಥಳಾಂತರ ಸೇರಿದಂತೆ ನೀರು, ಶೌಚಗೃಹ, ನೆರಳಿನ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ 8 ದಿನಕ್ಕೆ ಕಾಲಿಟ್ಟಿದೆ.
ಇದೂವರೆಗೂ ವಾರದ ಸಂತೆಯ ರೈತರಿಂದ ತರಕಾರಿ ದೇಣಿಗೆ ಪಡೆದು ಸ್ವಂತ ಹಣದಲ್ಲಿ ಉಳಿದ ಅಡುಗೆ ಸಾಮಗ್ರಿಗಳನ್ನು ತಂದು ಧರಣಿ ನಿರತರು ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ ಬುಧವಾರ ಧರಣಿಗೆ ಸಾರ್ವಜನಿಕರ ಬೆಂಬಲ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ಅಡುಗೆಗೆ ಅವಶ್ಯಕವಾದ ಸಾಮಗ್ರಿ ತಂದು ಕೊಟ್ಟು ಧರಣಿಗೆ ಸಹಕಾರ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಶಂಕರೇಶ್ ಮಾತನಾಡಿ, ರೈತ ಸಂಘ ನಮಗಾಗಿ ಧರಣಿ ನಡೆಸುತ್ತಿದ್ದಾರೆ. ಸಂತೆ ಸ್ಥಳಾಂತರಗೊಂಡರೆ ರೈತರಿಗೂ, ವರ್ತಕರಿಗೂ, ಗ್ರಾಹಕರಿಗೂ ಅನುಕೂಲ ಆಗುತ್ತದೆ. ಪ್ರತಿ ಬಾರಿ ಸುಂಕ ಸಂಗ್ರಹದ ಹರಾಜು ಸಂದರ್ಭದಲ್ಲಿ ಸ್ಥಳಾಂತರಿಸುವ, ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಭರವಸೆ ನೀಡಿ ಹರಾಜು ಪ್ರಕ್ರಿಯೆ ನಡೆಸುತ್ತಾರೆ. ಆದರೆ ಎರಡ್ಮೂರು ದಶಕಗಳಿಂದಲೂ ಲಕ್ಷಾಂತರ ರೂಪಾಯಿ ಸುಂಕ ಸಂಗ್ರಹಿಸಿದ್ದಾರೆ. ಸೌಲಭ್ಯ ಕಲ್ಪಿಸಿಲ್ಲ. ಕಟ್ಟುತ್ತಿರುವ ಸುಂಕಕ್ಕೆ ಪ್ರತಿಯಾಗಿ ಸೌಕರ್ಯ ಕೊಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ಇಂತರ ಹೋರಾಟ ಎಷ್ಟು ದಿನಗಳು ನಡೆದರೂ ಸಹ ಊಟ, ತಿಂಡಿಗೆ ಅಕ್ಕಿ ಕೊಡುತ್ತೇನೆ ಎಂದರು.
ರೈತರಿಗೆ ದಿನಸಿ ಕೊಟ್ಟು ಮಾತನಾಡಿದ ದುರ್ಗಣ್ಣ, ನಮಗಾಗಿ ಹೋರಾಟ ಮಾಡುತ್ತಿರುವ ರೈತರು ಉಪವಾಸ, ವನವಾಸ ಪಡಬಾರದು, ಹೋರಾಟದ ಜತೆಗೆ ಅನ್ನಕ್ಕೂ ಪರದಾಡಬಾರದು ಎಂದು ನಾವು ಧರಣಿ ನಡೆಸುವ ಅಷ್ಟೂ ದಿನ ದಿನಸಿ ನೀಡುತ್ತೇವೆ. ಸಾರ್ವಜನಿಕರೂ ಸಹ ತಮ್ಮ ಕೈಲಾದ ಸಹಾಯ ಮಾಡಬೇಕು ಮತ್ತು ಸಂಘ&ಸಂಸ್ಥೆಗಳು ಧರಣಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, ರೈತ ಪ್ರತಿಯೊಂದನ್ನೂ ಹೋರಾಟ ಮಾಡಿ ಪಡೆಯುವುದು ಅನಿವಾರ್ಯವಾಗಿದೆ. ಹಾಗಾಗಿ ಬೇಡಿಕೆ ಈಡೇರುವವರೆಗೂ ಧರಣಿ ಹಿಂಪಡೆಯಬಾರದೆಂದು ಗಟ್ಟಿ ನಿರ್ಧಾರದೊಂದಿಗೆ 3ನೇ ಬಾರಿ ಅಹೋರಾತ್ರಿ ಧರಣಿಗೆ ಕೈ ಹಾಕಿದ್ದೇನೆ. ಸಾರ್ವಜನಿಕರಿಗೂ ನಮ್ಮ ಹೋರಾಟ ನ್ಯಾಯ ಸಮ್ಮತ ಎನ್ನಿಸಿ ಊಟತಿಂಡಿಗೆ ದಿನಸಿ ನೀಡುತ್ತಿದ್ದಾರೆ. ಈ ಸ್ಪಂದನೆಯಿಂದ ನಮ್ಮ ಹೋರಾಟಕ್ಕೆ ಆನೆ ಬಲ ಬಂದಿದೆ. ನಿಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ರಾಜ್ಯ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು, ಟಿ.ಎಸ್.ಪ್ರಶಾಂತ್, ಮಲ್ಲೇಶಣ್ಣ, ನೀರಾ ಈರಣ್ಣ, ಮೆಕಾನಿಕ್ ಜಗದೀಶ್, ಬಿ.ಲಕ್ಷೀ, ರಮೇಶ್, ಮಂಜುನಾಥ್, ರೇವಣ್ಣ, ನಿಂಗಪ್ಪ, ಹನುಮಂತರಾಜ್ ಅರಸ್, ಪೆದ್ದಾಬೋವಿ, ಬಸವರಾಜು, ಮಂಜನಾಯ್ಕ, ಲಕ್ಷ್ಮಮ್ಮ, ಯಶೋದಮ್ಮ, ಆಶಾ ಮತ್ತಿತರರು ಇದ್ದರು.