

ಪಾವಗಡ: ಇಲಾಖೆಯು ಕಾರ್ಮಿಕರನ್ನು ಸೋಮವಾರ ಕುರಿಗಳಂತೆ ಕಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಸಂತೆ ಮತ್ತು ಕುರಿ ಸಂತೆ ಮೈದಾನದಲ್ಲಿ ಸೋಮವಾರ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರ್ಮಿಕ ಇಲಾಖೆ ಯಾವುದೇ ಪೂರ್ವತಯಾರಿ ಇಲ್ಲದೆ ಕಿಟ್ ವಿತರಿಸಲು ಮುಂದಾಗಿದ್ದರಿಂದ ಒಮ್ಮೆಲೆ ಐದು ಸಾವಿರಕ್ಕೂ ಅಧಿಕ ಕಾರ್ಮಿಕರು ಆಗಮಿಸಿ ಬಿಟ್ಟರು. ಹೀಗಾಗಿ ಎಸ್‌ಐ ನಾಗರಾಜು ಮತ್ತು ಸಿಬ್ಬಂದಿ ಕಾರ್ಮಿಕರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರು ಆಗಮಿಸಿದ್ದು, ಆಹಾರ ಕಿಟ್ ಪಡೆಯಲು ಬಂದಿದ್ದ ಕಾರ್ಮಿಕರು ಮಾಸ್ಕ್ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಕಾರ್ಮಿಕ ಇಲಾಖೆ ಧಿಕಾರಿಗಳು ಬೆರಳೆಣಿಕೆಯಲ್ಲಿದ್ದರಿಂದ ನೂಕು-ನುಗ್ಗಲಿಂದ ಕಿಟ್ ವಿತರಿಸಿ ಕೈತೊಳೆದುಕೊಂಡರು.
ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಸ್ಮಾರ್ಟ್‌ಕಾರ್ಡ್ ಇರುವ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಕಟ್ಟಡ ಕಾರ್ಮಿಕರು, ಬಡಗಿ, ಹಮಾಲರು, ಲಾರಿಚಾಲಕರು, ಆಟೋ ಚಾಲಕರು, ಮಡಿವಾಳರು, ಟೈಲರ್‌ಗಳು, ಕುಂಬಾರರು, ಭಜಂತ್ರಿ, ಎಪಿಎಂಸಿ ಹಮಾಲರು ಸೇರಿ ವಿವಿಧ ಕಾರ್ಮಿಕ ಸಂಘದ ಪದಾಧಿಕಾರಿಗಳು ಆಗಮಿಸಿದ್ದರು.
ಆಹಾರದ ಕಿಟ್ ಪಡೆಯಲು ತಾಲೂಕಿನ ಮೂಲೆ ಮೂಲೆಗಳಿಂದ ಬಾಡಿಗೆ ವಾಹನಗಳಲ್ಲಿ ಕಾರ್ಮಿಕರು ಆಗಮಿಸಿದ್ದು, ಆಹಾರ ಸಾಮಗ್ರಿ ಪಡೆಯದೆ ಕೆಲವರು ವಾಪಸಾದರು. ಶಾಸಕ ವೆಂಕಟರವಣಪ್ಪ, ತಹಸೀಲ್ದಾರ್ ಡಿ.ವರದರಾಜು, ಮಾಜಿ ಶಾಸಕ ಸೋಮ್ಲಾನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್. ವಿ.ವೆಂಕಟೇಶ್, ಪಾಪಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎನ್.ನರಸಿಂಹಯ್ಯ, ಪುರಸಭಾ ಸದಸ್ಯರಾದ ಪಿ.ಎಚ್.ರಾಜೇಶ್, ರವಿ, ಮಹಮದ್‌ಇಮ್ರಾನ್ ಇದ್ದರು.