

ಬೈಲುಕುಪ್ಪೆ: ಬೌದ್ಧ ಧರ್ಮಗುರು ದಲೈಲಾಮಾ ಅವರ ಹುಟ್ಟುಹಬ್ಬ ಪ್ರಯುಕ್ತ ಲಾಮಾ ಕ್ಯಾಂಪಿನ ಸೆರಜೆ ವತಿಯಿಂದ ದೊಡ್ಡ ಹರವೆ ಗ್ರಾಮದ ಎಲ್ಲ ವರ್ಗದ ಕಾರ್ಡ್‌ದಾರ ಕುಟುಂಬಸ್ಥರಿಗೆ ದಿನಸಿ ಕಿಟ್ ವಿತರಣೆ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಭಾನುವಾರ ಆಯೋಜಿಸಲಾಗಿತ್ತು.
ದೊಡ್ಡಹರವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ತುಪ್ತಿನ್‌ದೇಶ ಮಾತನಾಡಿ, ಬೌದ್ಧ ಧರ್ಮದ ಸರ್ವೋಚ್ಚ ಆಧ್ಯಾತ್ಮಿಕ ನಾಯಕ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ 14ನೇ ದಲೈಲಾಮಾ ಅವರ 90ನೇ ಜನ್ಮ ದಿನೋತ್ಸವದ ಸ್ಮರಣಾರ್ಥ ಸೆರೆಜೆ ಆರೋಗ್ಯ ರಕ್ಷಣಾ ಸಮಿತಿ ಈ ವರ್ಷವನ್ನು ದಾನ ವರ್ಷ ಎಂದು ಅರ್ಪಿಸಲಾಯಿತು ಎಂದು ತಿಳಿಸಿದರು.
ಗ್ರಾಮದ ಎಲ್ಲ ಕಾರ್ಡ್‌ದಾರರಿಗೆ ಅಕ್ಕಿ, ಸಕ್ಕರೆ, ಸೋಪು, ಗೋಧಿ, ಉಪ್ಪು ಸೇರಿದಂತೆ ದಿನಸಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಲಾಮಾ ಕ್ಯಾಂಪಿನಲ್ಲಿ 30 ಹಾಸಿಗೆಯ ದೊಡ್ಡ ಆಸ್ಪತ್ರೆ ನಿರ್ಮಿಸಿ ಈ ವರ್ಷಪೂರ್ತಿ ಆಸ್ಪತ್ರೆಯಲ್ಲಿ ಎಲ್ಲ ವರ್ಗದ ಬಡವರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಬೈಲುಕುಪ್ಪೆ ಸುತ್ತಮುತ್ತ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಏರ್ಪಡಿಸಲಾಗುತ್ತದೆ. ಶನಿವಾರ ರಾಣಿಗೇಟ್‌ನ ಎಲ್ಲ ವರ್ಗದ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ ಮಾಡಲಾಗಿದೆ. ಆರೋಗ್ಯ ತಪಾಸಣೆ ನಡೆಸಲಾಗಿತ್ತು ಎಂದು ಹೇಳಿದರು.
ಸೆರಾಜೆ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಲವಂಗ್‌ಚುಟ್ರು, ಪದಾಧಿಕಾರಿಗಳಾದ ತುಪ್ಪದೀನ್ ತೆಂಜಿನ್, ಲೋಪ್ಸಾ ಸಿರ್ಜಿಂ, ಡಾ ತೆಂಜಿನ್ ಲೋಡೋ, ಡಾ.ಎಂಜಿನ್ ಹ್ಯಾಮ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಗ್ರಾಮದ ಮುಖಂಡರಾದ ಸಣ್ಣಯ್ಯ, ಜಲೇಂದ್ರ, ಪುಟ್ಟಸ್ವಾಮಿ, ನಾಗರಾಜು, ಬಸವರಾಜು, ಅಣ್ಣಯ್ಯ, ಲಕ್ಷ್ಮಣ ಇತರರು ಇದ್ದರು.