ಗೃಹಲಕ್ಷ್ಮೀ ಮನೆಗೇ ಬಾರಮ್ಮ…

30sgr1
ಸಾಗರದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಪಲ್ಲವಿ ಸಾತೇನಹಳ್ಳಿ, ಮಧುಮಾಲತಿ, ಎನ್.ಲಲಿತಮ್ಮ, ಚಂದ್ರಶೇಖರ ನಾಯ್ಕ ಇತರರಿದ್ದರು.
Published on

ಸಾಗರ: ಗೃಹಲಕ್ಷ್ಮೀ ಯೋಜನೆ ನಮ್ಮ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳ ಪೈಕಿ ನಾಲ್ಕನೇ ಗ್ಯಾರಂಟಿ. ಇದನ್ನು ಇಂದು ಅನುಷ್ಠಾನಕ್ಕೆ ತಂದಿದ್ದೇವೆ. ಇದೊಂದು ಐತಿಹಾಸಿಕ ಕ್ಷಣ, ಯೋಜನೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಿ, ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವದ ಯೋಜನೆ ಅರ್ಹ ಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ 1.11 ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಇಂದಿನಿಂದ 2ಸಾವಿರ ರೂ. ಜಮೆ ಆಗಲಿದೆ. ಗ್ಯಾರಂಟಿ ಅನುಷ್ಠಾನ ಇತಿಹಾಸದಲ್ಲಿಯೇ ದಾಖಲಾಗುವಂತಹ ಕಾರ್ಯಕ್ರವವಾಗಿದ್ದು ದೇಶದಲ್ಲಿ ಮೊದಲು ಎನ್ನುವ ಹೆಮ್ಮೆ ನಮಗಿದೆ. ರಾಜ್ಯದಲ್ಲಿ 51 ಸಾವಿರ ಕೋಟಿ ರೂ. ವಿವಿಧ ಯೋಜನೆ ಮೂಲಕ ಲಾನುಭವಿಗಳಿಗೆ ತಲುಪುತ್ತಿದೆ. ಅನ್ನಭಾಗ್ಯ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ಜತೆಗೆ ಈಗ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದಿದ್ದು ರಾಜ್ಯದ ಬಹುತೇಕ ಕುಟುಂಬಕ್ಕೆ ಇದು ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗಿದೆ. ಒಂದಲ್ಲ ಒಂದು ಹಂತದಲ್ಲಿ ಪೂರ್ಣ ಕುಟುಂಬ ಯೋಜನೆಯ ಪ್ರಯೋಜನ ಪಡೆಯುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಿದ ಅಧಿಕಾರಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮಹಿಳೆಯರು ಸರ್ಕಾರ ತಮಗೆ ನೀಡಿದ 2 ಸಾವಿರ ರೂ.ಗಳಲ್ಲಿ ನಿಮ್ಮ ಪತಿ ಕೇಳಿದರೆಂದು 1 ಸಾವಿರ ಹಣ ಕೊಟ್ಟಿರಿ ಜೋಕೆ. ಈ ಹಣ ಪೂರ್ಣ ನಿಮಗೆ ಉಪಯೋಗವಾಗಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ಕೊನೆಯಲ್ಲಿ ಪುರಂದರ ದಾಸರ ಕೀರ್ತನೆ ಭಾಗ್ಯದ ಲಕ್ಷ್ಮೀ ಬಾರಮ್ಮ ಎರಡು ಸಾಲುಗಳನ್ನು ಹೇಳಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಮನೆಗೆ ಬಾರಮ್ಮ ಎಂದು ಹೇಳಿ ಮಹಿಳೆಯರ ಚಪ್ಪಾಳೆ ಗಿಟ್ಟಿಸಿಕೊಂಡರು.
ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮಾತನಾಡಿ, ರಾಜ್ಯದಲ್ಲಿ 10 ಸಾವಿರ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಾಗುತ್ತಿದ್ದು ಖಾತೆಗೆ ನೇರ ಹಣ ಜಮೆ ಆಗುತ್ತದೆ. ನಗರವ್ಯಾಪ್ತಿಯಲ್ಲಿ 7 ಕೇಂದ್ರಗಳಲ್ಲಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಏಕಕಾಲಕ್ಕೆ ಯೋಜನೆ ಅನುಷ್ಟಾನಗೊಳ್ಳುತ್ತಿದೆ. ಗೃಹಲಕ್ಷ್ಮೀ ಯೋಜನೆ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಇದನ್ನು ವ್ಯವಸ್ಥಿತವಾಗಿ ತಲುಪಿಸಿವಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರುಲ್ಲಾ ಮಧುಕರ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಎನ್.ಲಲಿತಮ್ಮ, ಸಬೀನಾ ತನ್ವೀರ್, ಸೈಯದ್ ಜಾಕೀರ್, ನಾಗರತ್ನಾ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಇತರರಿದ್ದರು. ಪೌರಾಯುಕ್ತ ಎಚ್.ಕೆ.ನಾಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗೃಹಲಕ್ಷ್ಮೀಯರಿಗೆ ಊಟ ಮತ್ತು ಸಿಹಿಯನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net