

ಕುಕನೂರು: ಗೃಹಲಕ್ಷ್ಮೀ ಯೋಜನೆಯ ನೋಂದಣಿ ಆರಂಭವಾಗಿದ್ದು, ಕುಟುಂಬದ ಮುಖ್ಯಸ್ಥ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ತಾಪಂ ಇಒ ಸಂತೋಷ ಬಿರದಾರ ಹೇಳಿದರು.
ತಾಲೂಕಿನ ಗಾವರಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸುವ ಅಭಿಯಾನಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ರಾಜ್ಯದಲ್ಲಿ ವಾಸಿಸುವ ಕುಟುಂಬದ ಮುಖ್ಯಸ್ಥ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಮಾಸಿಕ 2 ಸಾವಿರ ರೂ. ನೇರವಾಗಿ ಜಮೆಯಾಗುತ್ತದೆ. ಅರ್ಜಿ ಸಲ್ಲಿಸಲು ಪಡಿತರ ಚೀಟಿ ಸಂಖ್ಯೆ, ಪತಿ, ಪತ್ನಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿ ನೀಡಬೇಕು. ಆಧಾರ್ ಕಾರ್ಡ್ ಜೋಡನೆ ಆಗಿರುವ ಮೊಬೈಲ್ ತರಬೇಕು. ನೊಂದಣಿಗೆ ಗ್ರಾಪಂಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಹಾಗೂ ಪಪಂ ಗುರುತಿಸಿದ ಸ್ಥಳಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ತಕ್ಷಣವೇ ಮಂಜೂರಾತಿ ಆದೇಶ ನೀಡಲಾಗುತ್ತದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲ್, ಸಿಡಿಪಿಒ ಸಿಂಧು ಯಲಿಗಾರ, ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ ಗುಗ್ಗರಿ, ಅಂಗನವಾಡಿ ಕಾರ್ಯಕರ್ತೆ ಲಲಿತಾ ಕಲಿಕೇರಿಮಠ ಇತರರಿದ್ದರು.