ಉಪ್ಪಿನಬೆಟಗೇರಿ ಗ್ರಾಪಂನಲ್ಲಿ ಗೃಹಲಕ್ಷ್ಮಿ ವೀಕ್ಷಣೆ

30 upbr 1-Gruhalaxmi
Published on

ಉಪ್ಪಿನಬೆಟಗೇರಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಚಾಲನೆ ದೊರೆತಿದ್ದರಿಂದ ಮೈಸೂರಿನ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಸ್ಥಳೀಯ ಶ್ರೀ ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಮಾಡಿತ್ತು.

ಗ್ರಾಪಂ ಅಧ್ಯಕ್ಷ ಮಂಜುನಾಥ ಮಸೂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಲಾನುಭವಿಗಳಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಆಧಾರ ಕಾರ್ಡ್ ಹಾಗೂ ಗೃಹಲಕ್ಷ್ಮಿ ಅರ್ಜಿಗಳ ಜೆರಾಕ್ಸ್ ಪಡೆಯಲು ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಕಲ್ಯಾಣ ಮಂಟಪದ ಮುಂದೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಂದ ಫಲಾನುಭವಿಗಳ ಹೆಸರು, ದೂರವಾಣಿ ಸಂಖ್ಯೆ ಪಡೆದು ರಜಿಸ್ಟರ್​ನಲ್ಲಿ ಸಹಿ ಮಾಡಿಸಿಕೊಳ್ಳುತ್ತಿದ್ದರು. ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಗೆ ಹನುಮನಕೊಪ್ಪ, ಹನುಮನಾಳ, ಸೈಬನಕೊಪ್ಪ ಗ್ರಾಮಗಳು ಒಳಗೊಂಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದ ಮಹಿಳೆಯರು ಟಿವಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದರು.

ಉಪಾಧ್ಯಕ್ಷೆ ಜೈಬುನಬಿ ಜೋರಮ್ಮನವರ, ಹಿರಿಯರಾದ ವೀರಣ್ಣ ಪರಾಂಡೆ, ಚನಬಸಪ್ಪ ಮಸೂತಿ, ರಾಮಲಿಂಗಪ್ಪ ನವಲಗುಂದ, ಮಂಜುನಾಥ ಸಂಕಣ್ಣವರ ಪಿಡಿಒ ಬಿ.ಎ. ಬಾವಾಕಾನವರ, ಇತರರು ಪಾಲ್ಗೊಂಡಿದ್ದರು. ವಿರೂಪಾಕ್ಷಪ್ಪ ಬಮ್ಮಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net