

ಮೈಸೂರು: ತಾಂತ್ರಿಕ ಕಾರಣದಿಂದ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ಪಾವತಿ ವಿಳಂಬವಾಗಿದೆ. ಬಾಕಿ ಹಣವನ್ನೂ ಫಲಾನುಭವಿಗಳ ಖಾತೆಗೆ ಒಂದೇ ಸಲಕ್ಕೆ ಜಮಾ ಮಾಡಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದರು.
ಕಳೆದ 2 ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ತಾಂತ್ರಿಕ ದೋಷ ಇದಕ್ಕೆ ಕಾರಣ. ಇದು ಸರಿಹೋಗಲಿದ್ದು, ಇದಕ್ಕೆ ಹಣ ಕೊರತೆ ಕಾರಣವಲ್ಲ. 5 ಗ್ಯಾರಂಟಿ ಯೋಜನೆಗಳಿಗಾಗಿ ಈಗಾಗಲೇ 57 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಗೃಹಲಕ್ಷ್ಮಿ ಹಣ ಬಿಡುಗಡೆಯಾಗಲಿದ್ದು, ಈ ಕುರಿತು ಯಾವುದೇ ರೀತಿ ಸಂಶಯ ಬೇಡ ಎಂದರು.
ತಾಂತ್ರಿಕ ದೋಷದಿಂದ ಕೆಲ ಫಲಾನುಭವಿಗಳಿಗೆ ಈ ಯೋಜನೆ ಲಾಭ ದೊರೆಯುತ್ತಿಲ್ಲ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಬಡವರ ಬದುಕಿಗೆ ಬೆಳಕು ನೀಡುವ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ 5ನೇ ಸ್ಥಾನದಲ್ಲಿ ಇದೆ. ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆಯ ಕುರಿತು ಮಾಹಿತಿ ನೀಡದ ಅವರು, ಪ್ರತಿ ತಿಂಗಳು ಜಿಲ್ಲೆಗಳ ಸ್ಥಾನಗಳು ವ್ಯತ್ಯಾಸವಾಗುತ್ತಿದೆ. ಒಂದು ಸಲ ಗದಗ ಜಿಲ್ಲೆ ಇದ್ದರೆ, ಇನ್ನೊಂದು ಸಲ ಚಾಮರಾಜನಗರ ಜಿಲ್ಲೆ ಇರುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಸಭೆಗೆ ಅಪೂರ್ಣ ಮಾಹಿತಿ ನೀಡಿದ್ದೀರಿ. ಶೇಕಡವಾರು ಪ್ರಗತಿಯ ಮಾಹಿತಿ ನೀಡಿಲ್ಲ ಏಕೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಪ್ರಶ್ನಿಸಿದರು. ಇದರ ಗಂಭೀರತೆಯ ಮನವರಿಕೆ ಇಲ್ಲವೇ? ಸರ್ಕಾರ 56 ಸಾವಿರ ಕೋಟಿ ರೂ. ವಾರ್ಷಿಕವಾಗಿ ಖರ್ಚಾಗುತ್ತಿದೆ. ಕಾಟಾಚಾರಕ್ಕೆ ಸಭೆ ಆಗಬಾರದು ಎಂದು ಕಿಡಿಕಾರಿದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸಭೆಯಿಂದ ಹೊರಟು ನಿಂತಾಗ ಆಕ್ರೋಶ ವ್ಯಕ್ತಪಡಿಸಿದರು. ನನಗೆ ಸರ್ಕಾರ ಉಪಾಧ್ಯಕ್ಷರಾಗಿ ಮಾಡಿ ಕಾರು, ಸಿಬ್ಬಂದಿ ಕೊಟ್ಟಿದೆ. ಆದರೆ, ಅಧಿಕಾರಿಗಳು ಹೊರಟು ನಿಂತರೆ ಹೇಗೆ? ಎಂದು ಪ್ರಶ್ನಿಸಿದರು. ಅಧಿಕಾರಿಗಳು ಪಾಲ್ಗೊಂಡು ಮಾಹಿತಿ ನೀಡಬೇಕು. ಹುಡುಗಾಟಕ್ಕೆ ಸಭೆಗೆ ಬರುವುದನ್ನು ನಿಲ್ಲಿಸಿ. ಕಾಟಾಚಾರಕ್ಕೆ ಮಾಹಿತಿ ನೀಡಬೇಡಿ. ಮೊದಲ ಸಭೆಗೆ ಅಪೂರ್ಣ ಮಾಹಿತಿ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕು ಮಟ್ಟದ ಹಾಗೂ ಗ್ರಾಪಂ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಳಿಗೆ ಭೇಟಿ ನೀಡಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದರ ಮಾಹಿತಿ ಕಲೆಹಾಕಬೇಕು. ಜನರಿಗೆ ತಲುಪುತ್ತಿಲ್ಲವಾದರೆ ಅದರ ಬಗ್ಗೆ ಕ್ರಮ ಕೈಗೊಂಡು ಯಾರೊಬ್ಬರೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದು, ಇದನ್ನು ವಿತರಿಸಲು ನಿರ್ದಿಷ್ಟ ಸಮಯ ನಿಗದಿ ಮಾಡದೆ ತಮ್ಮ ಬಿಡುವಿನ ವೇಳೆಯಲ್ಲಿ ವಿತರಿಸುವಂತೆ ಹೇಳುತ್ತಿರುವುದು ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು. ಫಲಾನುಭವಿಗಳ ಬಯೋಮೆಟ್ರಿಕ್‌ನಲ್ಲಿ ತೊಂದರೆ ಉಂಟಾದರೆ ಅದಕ್ಕೆ ಪರ್ಯಾಯ ಮಾರ್ಗ ನೀಡಿ ಪ್ರತಿಯೊಬ್ಬರಿಗೂ ಪಡಿತರ ದೊರಕುವಂತೆ ಮಾಡಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ದಸರಾದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ನಡೆಸಬೇಕು. ತಾಲೂಕು ಮಟ್ಟದ ಕಾರ್ಯಕ್ರಮಗಳಲ್ಲೂ ಪ್ರಚಾರ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಪ್ರಚಾರ ಕಾರ್ಯಕ್ರಮ ರೂಪಿಸಬೇಕು. ಸರ್ಕಾರಿ ಕಚೇರಿ, ವಿದ್ಯಾಸಂಸ್ಥೆ, ಆಸ್ಪತ್ರೆ, ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೋರ್ಡಿಂಗ್, ಪೋಸ್ಟರ್ ಹಾಕಬೇಕು. ಶಾಲಾ-ಕಾಲೇಜುಗಳಲ್ಲಿ ಸಂವಾದ ಏರ್ಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅರುಣ್ ಇನ್ನಿತರರಿದ್ದರು.