

ಧಾರವಾಡ: ಆ. 30ರಂದು ಇಡೀ ರಾಜ್ಯದಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮ ಆರಂಭ ಆಗಲಿದೆ. ಅದಕ್ಕಾಗಿ ನಮ್ಮ ನಾಯಕ ರಾಹುಲ್ ಗಾಂಧಿಯವರು ಮೈಸೂರಿಗೆ ಬರುತ್ತಿದ್ದಾರೆ. ದೇಶದಲ್ಲೇ ಇದು ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ಯೋಜನೆಯಿಂದ ಬಡ ಜನರಿಗೆ ಅನುಕೂಲ ಆಗಲಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಸಿಎಂ ಹಾಗೂ ಸರ್ಕಾರದ ಎಲ್ಲ ಸಚಿವರು ಅಭಿನಂದನಾರ್ಹರು. ಇದು ಜಿಡಿಪಿಗೆ ಸಹಕಾರಿಯಾಗುವ ಯೋಜನೆ. ವಿವಿಧ ಯೋಜನೆಗಳಿಂದ ಒಂದು ಕುಟುಂಬಕ್ಕೆ 6,000 ರೂ. ಕೊಟ್ಟಂತೆ ಆಗುತ್ತದೆ.ಧಾರವಾಡ ಜಿಲ್ಲೆಯಲ್ಲಿ 143 ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹು-ಧಾ ಅವಳಿನಗರದಲ್ಲಿ 12 ಕಡೆ ಕಾರ್ಯಕ್ರಮ ನಡೆಯಲಿದೆ. ಪಾಲಿಕೆಯ 83 ವಾರ್ಡ್ಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಪರದೆ ಹಾಕಲಾಗುವುದು. ಜಿಲ್ಲೆಯಲ್ಲಿ 4.04 ಲಕ್ಷ ಯೋಜನೆಯ ಫಲಾನುಭವಿಗಳಿದ್ದಾರೆ. ಅದರಲ್ಲಿ 3.40 ಲಕ್ಷ ಮಹಿಳೆಯರು ಗೃಹಲಕ್ಷ್ಮೀಗೆ ನೋಂದಣಿ ಮಾಡಿಕೊಂಡಿದ್ದಾರೆ. ಶೇ. 89ರಷ್ಟು ನೋಂದಣಿಯಾಗಿದ್ದು, ಉಳಿದವರ ನೋಂದಣಿ ಮುಂದುವರಿಯಲಿದೆ ಎಂದರು.