ಮಾಸಿಕ 2000 ರೂ. ಒದಗಿಸುವ ಗೃಹಲಕ್ಷ್ಮಿಯೋಜನೆ ನೋಂದಣಿ ಆರಂಭ. ನೋಂದಣಿ ಉಚಿತ, ಸ್ಥಳದಲ್ಲೇ ಮಂಜೂರಾತಿ ಪತ್ರ.

12
Published on

ವಿಜಯವಾಣಿ ಸುದ್ದಿಜಾಲ ಗದಗ
ಮಹಿಳೆಯರಿಗೆ ಮಾಸಿಕ 2000 ರೂ. ಒದಗಿಸುವ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಗದಗ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಅರ್ಹ ಫಲಾನುಭವಿಗಳು ನೋಂದಣಿ ಮಾಡಿಸಲು ಮುಗಿಬಿಳುತ್ತಿದ್ದಾರೆ. ಒಮದು ವೇಳೆ ಬ್ಯಾಂಕ್​ ಖಾತೆಗೆ ಆಧಾರ್​ ಜೋಡಣೆ ಆಗದೇ ಇದ್ದರೂ ಆರ್​ಟಿಜಿಎಸ್​ ಮೂಲಕ ಖಾತೆಗೆ 2000 ರೂ. ಜಮೆ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 282 ಗ್ರಾಮ ಒನ್​, ಬಾಪೂಜಿ ಸೇವಾ ಕೇಂದ್ರಗಳನ್ನು ಹಾಗೂ ನಗರ ಪ್ರದೇಶಗಳಲ್ಲಿ 9 ಕರ್ನಾಟಕ ಒನ್​ ಮತ್ತು 31 ಸ್ಥಳಿಯ ಸೇವಾ ಕೇಂದ್ರ ಸೇರಿ ಒಟ್ಟು 322 ಕೇಂದ್ರಗಳನ್ನು ಗುರುತಿಸಲಾಗಿದೆ. ಯಾವುದೇ ಸೇವಾ ಶುಲ್ಕ ಪಾವತಿಸದೇ ಉಚಿತ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಕೆಗೆ ಕಾಲಮಿತಿ ಇಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಏಕಾಏಕಿ ನೋಂದಣಿ ಪ್ರಕ್ರಿಯೆ ಆರಂಭ ಆಗಿದ್ದರಿಂದ ಸರ್ವರ್​ ಕೂಡ ಆಗಾಗ ಸ್ಥಗಿತಗೊಳ್ಳುತ್ತಿದ್ದು ಅರ್ಜಿ ಸಲ್ಲಿಸಲು ಸಮಸ್ಯೆ ಎದುರಾಗುತ್ತಿದೆ.

ಯಾರು ಅರ್ಹರು?
ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಈ ಯೋಜನೆಗೆ ಅರ್ಹರು. ಆದರೆ, ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆದಾರರು ಅಥವಾ ಜಿಎಸ್​ಟಿ ಪಾವತಿದಾರರು ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಯೋಜನೆಯ ಲಾಭ ಪಡೆಯಬಹುದು.

ಎಸ್​ಎಂಎಸ್​ ಮೂಲಕ ಮಾಹಿತಿ:
ನೊಂದಣಿ ಪ್ರಕ್ರಿಯೆ ಎರಡು ವಿಧಾನದ ಮೂಲಕ ಮಾಡಲಾಗುತ್ತಿದೆ. ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಯಜಮಾನಿ ಮಹಿಳೆಯ ಮೊಬೈಲ್​ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್​ಎಂಎಸ್​ ಮೂಲಕ ತಿಳಿಸಲಾಗುತ್ತಿದೆ. ಒಂದು ವೇಳೆ ಸೂಚಿತ ನೋಂದಣಿ ದಿನಾಂಕದಂದು ಲಾನುಭವಿ ನೋಂದಣಿ ಕೇಂದ್ರಕ್ಕೆ ಹೋಗದೇ ಇದ್ದರೆ ಸಂಜೆ 5 ಗಂಟೆ ಮೇಲೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್​ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್​, ವಾರ್ಡ ಕಛೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಛೇರಿಯಲ್ಲಿ ಗೃಹಲಕ್ಷ್ಮಿ ನೋಂದಣಿ ಮಾಡಿಕೊಳ್ಳಬಹುದು. ಜತೆಗೆ ಪ್ರಜಾಪ್ರತಿನಿಧಿ ಎಂಬ ಸ್ವಯಂ ಸೇವಕರನ್ನು ಜಿಲ್ಲಾಡಳಿತದಿಂದ ನೇಮಿಸಲಾಗಿದ್ದು, ಪ್ರಜಾಪ್ರತಿನಿಧಿಗಳು ಫಲಾನುಭವಿಗಳ ಮನೆಗೆ ಭೇಟಿ ನೀಡಿ ಸ್ಥಳದಲ್ಲೇ ನೋಂದಣಿ ಮಾಡುತ್ತಾರೆ.

ಏನೆಲ್ಲ ದಾಖಲೆ ಅಗತ್ಯ:
ಯೋಜನೆಯಡಿ ನೊಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಫಲಾನುಭವಿ ಮತ್ತು ಪತಿಯ ಆಧಾರ ಕಾರ್ಡ ಸಂಖ್ಯೆ, ಬ್ಯಾಂಕ್​ ಖಾತೆ ಪಾಸ್​ ಬುಕ್​ ಮಾಹಿತಿ ಅಗತ್ಯವಿದೆ. ಆಧಾರ ನಂಬರ್​ ಜೋಡಣೆಯಾಗಿರುವ ಬ್ಯಾಂಕ್​ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಬಯಸಿದ್ದಲ್ಲಿ ಅದೇ ಬ್ಯಾಂಕ್​ ಖಾತೆಯ ಪಾಸ್​ ಬುಕ್​ ವಿತರಿಸಬೇಕು.

ಕೋಟ್​:
ಗ್ರಾಮ-ಒನ್​, ಬಾಪೂಜಿ ಕೇಂದ್ರ, ಕರ್ನಾಟಕ ಒನ್​ ಕೇಂದ್ರಗಳಲ್ಲಿ ನೊಂದಾಯಿಸಿದ ಲಾನುಭವಿಗಳಿಗೆ ಗೃಹಲಕ್ಷ್ಮಿಮಂಜೂರಾತಿ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಾ ಮಂಜೂರಾತಿ ಪತ್ರ ತದನಂತರ ಮನೆ ವಿಳಾಸಕ್ಕೆ ತಲುಪಿಸುವ ವ್ಯವಸ್ಥೆ ಇದೆ. ಆಧಾರ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಡಿಬಿಟಿ ಮತ್ತು ಆಧಾರ್​ ಜೋಡಣೆಯಾಗದ ಬ್ಯಾಂಕ್​ ಖಾತೆಗೆ ಆರ್​ಟಿಜಿಎಸ್​ ಮೂಲಕ 2000 ರೂ. ಜಮೆ ಮಾಡಲಾಗುವುದು.
- ವೈಶಾಲಿ ಎಂ.ಎಲ್​. ಜಿಲ್ಲಾಧಿಕಾರಿ. ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net