

ನಂಜನಗೂಡು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿಯೋಜನೆಯಡಿ ಬರುತ್ತಿದ್ದ ಹಣವನ್ನು ಕೂಡಿಟ್ಟು ಕಿರಾಣಿ ಅಂಗಡಿ ತೆರೆಯುವ ಮೂಲಕ ಬಡ ವಿಧವೆಯೊಬ್ಬರು ಬದುಕು ಕಟ್ಟಿಕೊಂಡಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಯ್ಯನ ಛತ್ರ ಹೋಬಳಿಯ ಬೊಕ್ಕಳ್ಳಿ ಹೊಸೂರು ಗ್ರಾಮದ ನಿವಾಸಿ ನಾಗಮ್ಮ ಈಗ ಹೊಸದಾಗಿ ಅಂಗಡಿ ತೆರೆದು ಸ್ವಾವಲಂಬನೆಯಿಂದ ಬದುಕು ನಡೆಸುತ್ತಿದ್ದಾರೆ.
ಈಕೆಗೆ ನಾಲ್ಕು ಮಕ್ಕಳಿದ್ದು, ಕುಟುಂಬ ನಿರ್ವಹಣೆಗಾಗಿ ಕೂಲಿ ಅವಲಂಬಿಸಿದ್ದರು. ಗ್ಯಾರಂಟಿಯಡಿ ಪ್ರತಿ ತಿಂಗಳು 2,000 ರೂ. ಖಾತೆಗೆ ಜಮೆ ಆಗುತ್ತಿತ್ತು. ಈ ಪೈಕಿ ಒಂದು ಸಾವಿರ ರೂ. ಅನ್ನು ಗೃಹ ಬಳಕೆಗೆ, ಒಂದು ಸಾವಿರ ರೂ. ಅನ್ನು ಕೂಡಿಡುತ್ತಿದ್ದರು ಎನ್ನಲಾಗಿದೆ. ಇದೀಗ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಿರಾಣಿ ಅಂಗಡಿ ತೆರೆದು ಮಾದರಿಯಾಗಿದ್ದಾರೆ. ಅಲ್ಲದೆ ಕಿರಾಣಿ ಅಂಗಡಿಯಿಂದ ಬಂದ ಲಾಭದಿಂದ 4 ಕುರಿಗಳನ್ನೂ ಖರೀದಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಲವಾರು ಬಡ ಮಹಿಳೆಯರಿಗೆ ವರದಾನವಾಗಿದೆ. ನಾನು ಕೂಡ ಬಡತನದಲ್ಲಿದ್ದೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣ ಬರುತ್ತಿರುವುದರಿಂದ ಕುಟುಂಬದ ನಿರ್ವಹಣೆ ಹೊರತುಪಡಿಸಿ ಇದರಿಂದ ಉಪಯೋಗ ಪಡೆದುಕೊಳ್ಳಬೇಕು ಎಂಬ ಆಲೋಚನೆ ಮಾಡಿ ಕಿರಾಣಿ ಅಂಗಡಿ ತೆರೆದು ಜೀವನ ನಿರ್ವಹಣೆ ಮಾಡುತ್ತಿದ್ದೇನೆ.
ನಾಗಮ್ಮ ಬೊಕ್ಕಹಳ್ಳಿ ಹೊಸೂರು ನಿವಾಸಿ