

ಮಂಡ್ಯ: ನಗರದಲ್ಲಿ ಸುಮಾರು 24 ಕೊಳಚೆ ಪ್ರದೇಶಗಳಿವೆ. ಹೆಚ್ಚುವರಿಯಾಗಿ ಘೋಷಣೆಯಾಗಿಲ್ಲದ ಕೊಳಚೆ ಪ್ರದೇಶದ ಗುಣಲಕ್ಷಣಗಳನ್ನು ಹೊಂದಿರುವ ಹಲವು ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ನಿವೇಶನ ಮತ್ತು ವಸತಿರಹಿತರಿಗೆ ಪುನರ್ವಸತಿ ಕಲ್ಪಿಸಲು ನಗರದ ಸುತ್ತ 10 ಎಕರೆ ಸರ್ಕಾರಿ ಜಮೀನನ್ನು ಕಾಯ್ದಿರಿಸಲು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ವ್ಯಾಪ್ತಿಯ ಕೊಳಚೆ ಪ್ರದೇಶಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತೆಯೇ ನಗರದಲ್ಲಿರುವ ಲ್ಯಾಂಡ್ ಆರ್ಮಿ ಕೊಳಚೆ ಪ್ರದೇಶ, ಕಾಳಪ್ಪ ಬಡಾವಣೆ, ಹೊಸಹಳ್ಳಿ ಗುರುಮಠ ಕೊಳಚೆ ಪ್ರದೇಶ, ಹಾಲಹಳ್ಳಿ ಟ್ಯಾಂಕ್ ಬೆಡ್ ನ್ಯೂ ತಮಿಳು ಕಾಲನಿ, ಕಾಳಿಕಾಂಬ ಸ್ಲಂ ಪ್ರದೇಶ, ಸ್ಲಾಟರ್ ಹೌಸ್ ಸ್ಲಂ, ವಿವೇಕಾನಂದ ಬಡಾವಣೆ, ಮದ್ದೂರು ತಮಿಳು ಕಾಲನಿ, ಇಂದಿರಾ ಬಡಾವಣೆ, ವೇಣುಗೋಪಾಲ ಶಿಶು ವಿಹಾರ(ಗೂಬೆಹಳ್ಳ) ಕೊಳಚೆ ಪ್ರದೇಶ, ಹೊನ್ನಯ್ಯ ಬಡಾವಣೆಗಳ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಪೌರಾಯುಕ್ತ ಆರ್.ಮಂಜುನಾಥ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜವಾಹರ್ ಜೋಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್.ನಿರ್ಮಲಾ ಇತರರಿದ್ದರು.