

ಮುಂಡಗೋಡ: ಪ್ರತಿ ತಿಂಗಳು ಎರಡನೆಯ ವಾರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಕುಂದುಕೊರತೆಯ ಬಗ್ಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದಲಿತ ಮುಖಂಡರ ಸಭೆ ನಡೆಸಿ ಕುಂದುಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ರತಿ ತಿಂಗಳು 2ನೇ ವಾರದಲ್ಲಿ ದಲಿತ ಮುಖಂಡರ ಸಭೆಯನ್ನು ಪೊಲೀಸ್ ಠಾಣೆಯಲ್ಲಿ ನಡೆಸಲಾಗುವುದು. ಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯದವರಿಗೆ ಅನ್ಯಾಯವಾಗಿದ್ದಲ್ಲಿ ಹಾಗೂ ಇತರೆ ಕಾನೂನು ಸಮಸ್ಯೆಗಳು, ದಬ್ಬಾಳಿಕೆ, ದೌರ್ಜನ್ಯಗಳು ನಡೆದರೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಶಿರಸಿ ಡಿವೈಎಸ್‌ಪಿ ಗಣೇಶ ಕೆ.ಎಲ್., ಸಿಪಿಐ ಬಿ.ಎಸ್. ಲೋಕಾಪುರ, ದಲಿತ ಮುಖಂಡರಾದ ಚಿದಾನಂದ ಹರಿಜನ, ಬಸವರಾಜ ಸಂಗಮೇಶ್ವರ, ಬಸವರಾಜ ಹಳ್ಳಮ್ಮನವರ, ಹನ್ಮಂತ ಭಜಂತ್ರಿ, ಸುಭಾಸ ಇತರರಿದ್ದರು.